

ಚನ್ನರಾಯಪಟ್ಟಣ : ಮಹಿಳೆಯರು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ತಿಳಿಸಿದರು.
ಪಟ್ಟಣದ ಗಣಪತಿ ಪೆಂಡಾದಲ್ಲಿ ಸೋಮವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ವತಿಯಿಂದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಸೋಮವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಬಾಲ್ಯ ವಿವಾಹ ತಡೆ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಮತ್ತು ಕುಟುಂಬ ಸುಧಾರಣೆಯಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸಿದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ, ಈ ನಿಟ್ಟಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರಮ ಮಹತ್ತರವಾದದ್ದು ಎಂದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಗ್ಗೆ ಜನರಿಗೆ ಅಪಾರ ಗೌರವವಿದೆ. ಗ್ರಾಮೀಣ ಭಾಗದ ಜನರಿಗೆ ಬೆಳಕಾದ ಈ ಸಂಸ್ಥೆಯ ಜನಪರ ಯೋಜನೆಗಳಿಂದಾಗಿ ಯೋಜನೆ ಸದಸ್ಯರು ಸ್ವಾವಲಂಬಿಗಳಾಗಿ ಬದುಕುವಂತಾಗಿದೆ. ಯೋಜನೆಯು ಸಾರ್ವಜನಿಕರ ಅಭಿವೃದ್ಧಿ ಜತೆಗೆ ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬೆನ್ನೆಲುಬಾಗಿ ನಿಂತಿದೆ. 40 ವರ್ಷಗಳಿಂದ ಕರ್ನಾಟಕದ ಹಳ್ಳಿಹಳ್ಳಿಗಳಲ್ಲಿ ಗ್ರಾಮ ಅಭಿವೃದ್ಧಿ ಯೋಜನೆ ವಿಸ್ತರಣೆಯಾಗಿ 6.5 ಲಕ್ಷ ಸ್ವಸ್ವಹಾಯ ಸಂಘಗಳ ಮೂಲಕ 60 ಲಕ್ಷಕ್ಕೂ ಹೆಚ್ಚಿನ ಮಹಿಳೆಯರು ಸ್ವಾವಲಂಬಿ ಬದುಕು ಕಂಡುಕೊಂಡು, ಕುಟುಂಬದ ಆರ್ಥಿಕತೆಗೆ ಹೆಗಲೊಡ್ಡಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ತಾಲೂಕಿನಲ್ಲಿ ಕಾರ್ಯಾರಂಭಿಸಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಪೂಜ್ಯರ ಮಾರ್ಗದರ್ಶನದಲ್ಲಿ ಸ್ವ ಸಹಾಯ ಸಂಘಗಳ ಮೂಲಕ ಹಲವಾರು ಜನ ಉತ್ತಮ ಬದುಕನ್ನು ಕಟ್ಟಿಕೊಂಡು ಆರ್ಥಿಕವಾಗಿ ಸಧೃಢರಾಗಿದ್ದಾರೆ. ಸಂಸ್ಥೆಯು ಸದಸ್ಯರಿಗೆ ಆರ್ಥಿಕ ಸಹಕಾರ ನೀಡುವುದರ ಜತೆಗೆ ವ್ಯವಹಾರದ ಶಿಸ್ತು, ಸಂಸಾರ ನಿರ್ವಹಣೆ ಹಾಗೂ ಸಂಸ್ಕಾರಯುತ ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತಿರುವ ಸಂಸ್ಥೆ ಸಮಾಜದ ದುರ್ಬಲ ವರ್ಗದವರಿಗೆ ಆಶಾಕಿರಣವಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಅರ್ಚನಾ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಗ್ರಾಮೀಣ ಭಾಗದ ಮಹಿಳೆಯರ ಆರ್ಥಿಕ, ಶೈಕ್ಷಣಿಕ, ಕೃಷಿ, ಆರೋಗ್ಯ, ಸಾಮಾಜಿಕ ಸಬಲೀಕರಣ ಜತೆಯಲ್ಲಿ ಧಾರ್ಮಿಕ ತಳಹದಿಯಲ್ಲೂ ಕಾರ್ಯನಿರ್ವಹಿಸುತ್ತಿರುವ ದೇಶದ ಏಕೈಕ ಸಾಮಾಜಿಕ ಸೇವಾ ಸಂಸ್ಥೆಯಾಗಿದೆ. ಗ್ರಾಮೀಣ ಮಹಿಳೆಯರು ಆರ್ಥಿಕ ಸದೃಢತೆ ಹೊಂದಿದರೆ ಸ್ವಾವಲಂಬನೆಗೆ ದಾರಿಯಾಗುತ್ತದೆ. ನಾನಾ ತರಬೇತಿಗಳನ್ನು ಪಡೆದು ಆ ಮೂಲಕ ಎಲ್ಲ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು, ಆತ್ಮಸ್ಥೆರ್ಯದೊಂದಿಗೆ ಆರ್ಥಿಕ ಮತ್ತು ಸಾಮಾಜಿಕವಾಗಿ ಸದೃಢರಾದರೆ ಸಮಾಜದಲ್ಲಿ ಸುಖಿ ಜೀವನ ನಡೆಸಬಹುದು ಎಂದು ತಿಳಿಸಿದರು.
ದಮ್ಮನಿಂಗಲ ಸರ್ಕಾರಿ ಪ್ರೌಢಶಾಲೆಯ ಶಾಲೆಯ ದೈಹಿಕ ಶಿಕ್ಷಕಿ ಗಾಯತ್ರಿ ನಾಗರಾಜ್ ಸಂಸ್ಕೃತಿ ಹಾಗೂ ಸಂಸ್ಕಾರದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಯೋಜನೆಯ ಶ್ರವಣಬೆಳಗೊಳದ ಕ್ಷೇತ್ರ ಯೋಜನಾಧಿಕಾರಿ ಸದಾಶಿವ ಕುಲಾಲ್, ಮೇಲ್ವಿಚಾರಕರಾದ ಸುರೇಶ್ ಗೌಡ, ಪರಮೇಶ್, ರಮೇಶ್, ಸುಜಿತ್, ಸುಶೀಲಾ, ಆಂತರಿಕ ಲೆಕ್ಕಪರಿಶೋಧಕರಾದ ಕವಿತಾ, ಕೃಷಿ ಮೇಲ್ವಿಚಾರಕರಾದ ಮಹದೇವ ಪ್ರಸಾದ್, ಸ್ವಾತಿ, ಶಿವಲೀಲಾ ಸೇರಿದಂತೆ ಸ್ವಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.