ಗ್ಯಾಂಗ್​ರೇಪ್​ ಆರೋಪಿಯ ಮನೆಯನ್ನು ಧ್ವಂಸ ಮಾಡಿದ ಮಹಿಳಾ ಪೊಲೀಸ್​ ಅಧಿಕಾರಿಗಳು!

MP Woman Police
Published on

ಭೋಪಾಲ್​: ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಯ ಮನೆಯನ್ನು ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಕೆಡವಲಾಯಿತು. ಈ ಘಟನೆ ಮಧ್ಯಪ್ರದೇಶದ ದಾಮೋಹ್​ನಲ್ಲಿ ನಡೆದಿದೆ.

ಕೆಡವಲಾದ ಮನೆಯು ಕೌಶಲ್ ಕೆ. ಚೌಬೆ ಎಂಬ ವ್ಯಕ್ತಿಗೆ ಸೇರಿದ್ದಾಗಿದೆ. ಆರೋಪಿ ಚೌಬೆ, ದಾಮೋಹ್‌ನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ ನಾಲ್ವರು ಆರೋಪಿಗಳಲ್ಲಿ ಒಬ್ಬರು. ಸರಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದರಿಂದ ಅದನ್ನು ಕೆಡವಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಧ್ಯಪ್ರದೇಶದ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಇತರ ಮೂವರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಶುಕ್ರವಾರ (ಮಾ.10) ಕಿಶೋರ್‌ನನ್ನು ಬಂಧಿಸಲಾಗಿದೆ.

ಅಪರಾಧ ಕೃತ್ಯಗಳಲ್ಲಿ ತೊಡಗುವವರಲ್ಲಿ ಭಯ ಮೂಡಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ಪ್ರಶಿತಾ ಕುರ್ಮಿ ತಿಳಿಸಿದ್ದಾರೆ. ಮಹಿಳಾ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದು ಬುಲ್ಡೋಜರ್ ಬಳಸಿ ಆರೋಪಿಯ ಮನೆ ಕೆಡವಿದ್ದಾರೆ. ಪ್ರಶಿತಾ ನೇತೃತ್ವದಲ್ಲಿ ತೆರವು ಪ್ರಕ್ರಿಯೆ ಪೂರ್ಣಗೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net