ರಾಜ್ಯದಲ್ಲಿ ಮಹಿಳಾ ಅಧಿಕಾರಿಗಳಿಗೆ ರಕ್ಷಣೆಯಿಲ್ಲ: ಶ್ರೀ ಪ್ರಣಾವಾನಂದ ಸ್ವಾಮೀಜಿ ಅಸಮಾಧಾನ

sree pranavanda swamiji
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಜನಾರ್ಧನ್ ಅವರಿಗೆ ಕಲಬುರ್ಗಿ ಈಡಿಗ ಮಠದ ಶ್ರೀ ಪ್ರಣಾವಾನಂದ ಸ್ವಾಮೀಜಿ ಧೈರ್ಯ ತುಂಬಿದರು. ವೆಂಕಟೇಶಮೂರ್ತಿ ಇತರರಿದ್ದರು.
Published on

ಶಿವಮೊಗ್ಗ: ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಜ್ಯೋತಿ ಅವರಿಗೆ ಜೀವ ಬೆದರಿಕೆ ಹಾಕಿ, ಅವಾಚ್ಯ ಪದಗಳಿಂದ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಮುಖ ಆರೋಪಿಗಳನ್ನು ಬಂಧಿಸಬೇಕು. ಇಲ್ಲವಾದಲ್ಲಿ ಭದ್ರಾವತಿ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಕಲಬುರಗಿ ಈಡಿಗ ಮಠದ ಶ್ರೀ ಪ್ರಣಾವಾನಂದ ಸ್ವಾಮೀಜಿ ಎಚ್ಚರಿಸಿದರು.

ಮಹಿಳಾ ಅಧಿಕಾರಿಗೆ ನೈತಿಕ ಸ್ಥೈರ್ಯ ತುಂಬಬೇಕು. ಹಿಂದುಳಿದ ವರ್ಗದ ಪರವಾಗಿದ್ದೇವೆ ಎನ್ನುವ ಕಾಂಗ್ರೆಸ್ ಸರ್ಕಾರ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಪಮಾನ ಆದಾಗ ಆರೋಪಿಗಳನ್ನು ಬಂಧಿಸಲು ತೋರಿಸಿದ ಆಸಕ್ತಿಯನ್ನು ಇಲ್ಲಿ ಏಕೆ ತೋರುತ್ತಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ಭದ್ರಾವತಿಯಲ್ಲಿ ದಬ್ಬಾಳಿಕೆ ಮಿತಿ ಮೀರುತ್ತಿದೆ. ಮರಳು ಅಕ್ರಮ ಸಾಗಣೆ ತಡೆದ ಅಧಿಕಾರಿ ಮೇಲೆ ದರ್ಪ ತೋರಿದ್ದಾರೆ. ಮಹಿಳಾ ಅಧಿಕಾರಿಗಳಿಗೆ ಸರ್ಕಾರದಲ್ಲಿ ರಕ್ಷಣೆ ಇಲ್ಲ. ಹಾಗಾಗಿ ಅವರು ಭಯಭೀತರಾಗಿದ್ದಾರೆ. ಕೂಡಲೇ ಅವಾಚ್ಯ ನಿಂದನೆ ಮಾಡಿದವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಈಡಿಗ ಸಮಾಜ ಸ್ವಾಭಿಮಾನಿ ಸಮಾಜ. ಹಿಂದಿನ ಸರ್ಕಾರ ನಿಗಮ ಘೋಷಣೆ ಮಾಡಿದ್ದರೂ ಕಾಂಗ್ರೆಸ್ ಸರ್ಕಾರ ಒಂದು ರೂಪಾಯಿಯನ್ನೂ ನೀಡಿಲ್ಲ. ಈಡಿಗ ಅಧಿಕಾರಿಗಳನ್ನು ದಮನಿಸುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಆ ಮಹಿಳಾ ಅಧಿಕಾರಿಗೆ ಬೆದರಿಕೆ ಉಂಟಾದರೆ ಸಮಾಜ ಸುಮ್ಮನಿರುವುದಿಲ್ಲ. ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಿಗಿಂತ ಸಮಾಜದ ಹೆಣ್ಣು ಮಕ್ಕಳ ಸ್ವಾಭಿಮಾನ ದೊಡ್ಡದು. ಮೊಬೈಲ್‌ನಲ್ಲಿ ಸಂಗ್ರಹವಾಗಿರುವ ಧ್ವನಿ ಮುದ್ರಿತ ಮಾದರಿಯನ್ನು ಎ್ಎಸ್‌ಎಲ್‌ಗೆ ಕಳಿಸಿ ತನಿಖೆ ಮಾಡಲಿ. ಕೂಡಲೇ ಸಿಎಂ, ಡಿಸಿಎಂ ಮತ್ತು ಸೋನಿಯಾ ಗಾಂಧಿ ಅವರು ಈ ಬಗ್ಗೆ ಗಮನಹರಿಸಬೇಕು. ಇಲ್ಲವಾದರೆ ಈಡಿಗ ಸಮಾಜದ ಮತಗಳು ಬೇಡವೆಂದು ಘೋಷಿಸಲಿ ಎಂದು ಆಗ್ರಹಿಸಿದರು.

ರಾಷ್ಟ್ರೀಯ ಈಡಿಗ ಮಹಾ ಮಂಡಳಿ ಅಧ್ಯಕ್ಷ ವೆಂಕಟೇಶಮೂರ್ತಿ, ಪುಷ್ಪಲತಾ ಮೂರ್ತಿ, ಗೀತಾಂಜಲಿ ದತ್ತಾತ್ರೇಯ, ಪ್ರೀತಾ ಪೂಜಾರಿ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net