

ನವದೆಹಲಿ: ಭಾರತದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಯುಟಿ) ಇಂಟರ್ನೆಟ್ ಬಳಕೆ ವಿಚಾರದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಮಾತ್ರವಲ್ಲದೆ ಸ್ತ್ರೀ-ಪುರುಷರ ನಡುವೆಯೂ ಬಹಳ ಅಸಮಾನತೆಯಿದೆ ಎಂಬುದು ಐದನೇ ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯಿಂದ (ಎನ್ಎಫ್ಎಚ್ಎಸ್) ತಿಳಿದು ಬಂದಿದೆ. ಗ್ರಾಮೀಣ ಭಾರತದಲ್ಲಿ ಸರಾಸರಿಯಾಗಿ, 10 ಮಹಿಳೆಯರಲ್ಲಿ ಮೂರಕ್ಕಿಂತ ಕಡಿಮೆ ಹಾಗೂ ನಗರಗಳ 10 ಮಹಿಳೆಯರ ಪೈಕಿ ನಾಲ್ವರು ಇಂಟರ್ನೆಟ್ ಬಳಸುತ್ತಾರೆ ಎನ್ನುವುದನ್ನು ಸಮೀಕ್ಷೆ ಬಹಿರಂಗಪಡಿಸಿದೆ.
ಸಮೀಕ್ಷೆ ಸಾಮಾನ್ಯವಾಗಿ ಆರೋಗ್ಯ, ಕುಟುಂಬ ಯೋಜನೆ ಮತ್ತು ಪೌಷ್ಟಿಕತೆಯ ಸೂಚಕಗಳ ದತ್ತಾಂಶಗಳನ್ನು ಸಂಗ್ರಹಿಸುತ್ತದೆ. ಆದರೆ, 5ನೇ ಎನ್ಎಫ್ಎಚ್ಎಸ್ 2019ರಲ್ಲಿ ಅದೇ ಮೊದಲ ಬಾರಿಗೆ ಇಂಟರ್ನೆಟ್ ಬಳಸದೇ ಇರುವ ಮಹಿಳೆಯರು ಹಾಗೂ ಪುರುಷರ ಸೂಚಕಗಳ ಬಗ್ಗೆಯೂ ವಿವರಗಳನ್ನು ಕಲೆ ಹಾಕಿದೆ. 3.07 ಲಕ್ಷ ಕುಟುಂಬಗಳ ಸಮೀಕ್ಷೆ ಆಧಾರದಲ್ಲಿ ಅಂಕಿಅಂಶ ಕ್ರೋಡೀಕರಿಸಲಾಗಿದೆ.
ನಗರ ಭಾಗದಲ್ಲಿ ಮಹಿಳೆಯರು ಹೆಚ್ಚು ಇಂಟರ್ನೆಟ್ ಬಳಸುವ ರಾಜ್ಯಗಳು (ಶೇಕಡದಲ್ಲಿ): ಗೋವಾ-78.1, ಹಿಮಾಚಲಪ್ರದೇಶ-78.9, ಕೇರಳ-64.9, ಮಹಾರಾಷ್ಟ್ರ-54.3, ಮಣಿಪುರ-50.8, ಮೇಘಾಲಯ-57.8, ಮಿಜೋರಾಂ-83.8, ನಾಗಾಲ್ಯಾಂಡ್-66.5, ಸಿಕ್ಕಿಂ-90, ಜಮ್ಮು-ಕಾಶ್ಮೀರ-55, ಲಡಾಖ್-66.5, ಲಕ್ಷದ್ವೀಪ-61.80.
ಗಂಡನ ಮನೆಯಲ್ಲಿ ಹಿಂಸೆ ಹೆಚ್ಚಾಗಿರುವುದು ಕಳವಳಕಾರಿ ಸಂಗತಿ. ವಿವಿಧ ಪ್ರದೇಶಗಳಲ್ಲಿ ಹಿಂಸಾ ಸಂಸ್ಕೃತಿ ಹರಡಿರುವುದು ದೃಢಪಟ್ಟಿದೆ. | ಪೂನಂ ಮುಟ್ರೇಜಾ ಭಾರತ ಜನಸಂಖ್ಯಾ ಪ್ರತಿಷ್ಠಾನದ ನಿರ್ದೇಶಕಿ
ಸಮೀಕ್ಷೆ ನಡೆಸಲಾದ 20 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ಸಹಿತ ಐದು ರಾಜ್ಯಗಳಲ್ಲಿ ಶೇಕಡ 30ಕ್ಕೂ ಅಧಿಕ ಮಹಿಳೆಯರು ಕೌಟುಂಬಿಕ ಹಿಂಸೆಯಿಂದ ನರಳಾಡುತ್ತಿದ್ದಾರೆ. ಅಸ್ಸಾಂ, ಮಿಜೋರಾಂ, ತೆಲಂಗಾಣ ಮತ್ತು ಬಿಹಾರ ಇವುಗಳು ಪತಿಯ ಅಥವ ಆತನ ಮನೆಯವರಿಂದ ದೌರ್ಜನ್ಯ ಹೆಚ್ಚಿನ ಪ್ರಮಾಣದಲ್ಲಿರುವ ಇತರ ನಾಲ್ಕು ರಾಜ್ಯಗಳಾಗಿವೆ. 5ನೇ ಎನ್ಎಚ್ಎಫ್ಎಸ್ ಅಂಗವಾಗಿ 6.10 ಲಕ್ಷ ಕೌಟುಂಬಿಕ ಮಾದರಿಗಳನ್ನು ಅಧ್ಯಯನ ನಡೆಸಿದಾಗ ಈ ಅಂಶಗಳು ಬಯಲಾಗಿವೆ. ಕೋವಿಡ್-19 ಸಾಂಕ್ರಾಮಿಕತೆ ಹರಡಿರುವ ಹಿನ್ನೆಲೆಯಲ್ಲಿ ಈ ಹಿಂಸೆ ಪ್ರಮಾಣ ಇನ್ನೂ ಹೆಚ್ಚಾಗಿರಬಹುದು ಎಂಬುದು ಕಾರ್ಯಕರ್ತರು ಹಾಗೂ ಸರ್ಕಾರೇತರ ಸಂಸ್ಥೆಗಳು (ಎನ್ಜಿಒ) ಆತಂಕ ವ್ಯಕ್ತಪಡಿಸಿವೆ. ಕರ್ನಾಟಕದಲ್ಲಿ 18ರಿಂದ 49 ವರ್ಷ ವಯೋಮಿತಿಯ ಶೇಕಡ 44.4ರಷ್ಟು ಗೃಹಿಣಿಯರು ಗಂಡನ ಮನೆಯಲ್ಲಿ ಹಿಂಸೆ ಅನುಭವಿಸುತ್ತಿದ್ದಾರೆ. 4ನೇ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ. 20.6 ಆಗಿತ್ತು. ಕೌಟುಂಬಿಕ ಕಾಟ ಹೆಚ್ಚಿರುವ ಇತರ ರಾಜ್ಯಗಳ ಶೇಕಡಾವಾರು ಪ್ರಮಾಣ: ಬಿಹಾರ-40, ಮಣಿಪುರ-39, ತೆಲಂಗಾಣ-36.9, ಅಸ್ಸಾಂ-32, ಆಂಧ್ರಪ್ರದೇಶ-30.