

ನವದೆಹಲಿ: ಸೇನೆಯಲ್ಲಿ ಮಹಿಳೆಯರಿಗೂ ಸಮಾನ ಅವಕಾಶವಿರಬೇಕು ಎನ್ನುವ ಮೂಲಕ ಸುಪ್ರೀಂಕೋರ್ಟ್ ದೇಶದ ಯುವತಿಯರಿಗೆ ಉದ್ಯೋಗದ ಹೊಸ ಹಾದಿಯನ್ನೂ ತೆರೆದಿದೆ. ಅಲ್ಲದೆ, ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಸೇನೆಯಲ್ಲಿ ಮಹಿಳೆಯರ ಪ್ರವೇಶ ಹೊಸ ಬದಲಾವಣೆಗೆ ನಾಂದಿ ಹಾಡುವ ನಿರೀಕ್ಷೆಯಿದೆ. ಈ ತೀರ್ಪಿನಿಂದಾಗಿ ಕರ್ನಲ್ ಮತ್ತು ಅದಕ್ಕಿಂತಲೂ ಮಿಗಿಲಾದ ಹುದ್ದೆಗಳಿಗೂ ಮಹಿಳೆಯರನ್ನು ಪರಿಗಣಿಸಬಹುದಾಗಿದೆ. ಮುಂದೊಂದು ದಿನ ಮಹಿಳಾ ಉನ್ನತಾಧಿಕಾರಿಯೊಬ್ಬರು ಸೇನಾ ಮುಖ್ಯಸ್ಥರಾಗಿ ನೇಮಕ ಗೊಂಡರೂ ಅಚ್ಚರಿಯಿಲ್ಲ. ರಕ್ಷಣಾ ಮಂತ್ರಿಗಳಾಗಿ ನಿರ್ಮಲಾ ಸೀತಾರಾಮನ್ ನೇಮಕಗೊಳ್ಳುತ್ತಾರಾದರೆ ಸೇನೆಯ ಉನ್ನತ ಹುದ್ದೆ ಮಹಿಳೆಗೇಕೆ ಒಲಿಯಬಾರದು ಎಂಬ ಮಹಿಳಾ ಪರ ನಿಲುವಿಗೆ ಸುಪ್ರೀಂಕೋರ್ಟ್ ದನಿಗೂಡಿಸಿದೆ.
ಯುದ್ಧ ಭೂಮಿಕೆಯಲ್ಲಿ ವನಿತೆ: ನಾರ್ಡಿಕ್ ರಾಷ್ಟ್ರಗಳ (ಫಿನ್ಲೆಂಡ್, ಐಸ್ಲೆಂಡ್, ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಫಾರೊ ಐಲೆಂಡ್) ಸೇನೆಯಲ್ಲಿ ಲಿಂಗತಾರತಮ್ಯ ಇಲ್ಲ. ಧಾರ್ವಿುಕವಾಗಿ ಮಹಿಳೆಗೆ ಕಟ್ಟುಪಾಡು ಇರುವ ಇಸ್ರೇಲ್ ಮತ್ತು ಉತ್ತರ ಕೊರಿಯಾದಲ್ಲೂ ಈ ರೀತಿ ಅಸಮಾನತೆ ಇಲ್ಲ. ದಕ್ಷಿಣ ಏಷ್ಯಾದ ದೊಡ್ಡ ದೇಶ ಚೀನಾದಲ್ಲಿ ಮಹಿಳೆಯರು ಸಮರ ಭೂಮಿಯಲ್ಲಿ ಮುಖ್ಯಭೂಮಿಕೆಯಲ್ಲಿದ್ದಾರೆ.
ತಾನಿಯಾ ಶೆರ್ಗಿಲ್ ಉದಾಹರಣೆ: ಈ ವರ್ಷದ ಜ.26ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾರತೀಯ ಸೇನೆಯನ್ನು ಯುವ ಮಹಿಳಾ ಅಧಿಕಾರಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ ಮುನ್ನಡೆಸಿದ್ದರು. ಇದನ್ನು ತಮ್ಮ ತೀರ್ಪಿನಲ್ಲೂ ನ್ಯಾಯಮೂರ್ತಿಗಳು ಉಲ್ಲೇಖಿಸಿರುವುದು ವಿಶೇಷ. ನಮ್ಮ ಸಮಾಜದಲ್ಲಿ ಲಿಂಗ ತಾರತಮ್ಯ ಈಗಲೂ ಎದ್ದುಕಾಣುತ್ತಿರುವುದು ವಿಪರ್ಯಾಸ. ಪುರುಷರು ದೈಹಿಕವಾಗಿ ಸಬಲರು ಮತ್ತು ಮಹಿಳೆಯರು ದುರ್ಬಲರು ಎಂಬ ನಮ್ಮ ಗ್ರಹಿಕೆಯೇ ದೋಷಪೂರಿತವಾದದ್ದು. ಮಹಿಳೆಯರು ಕೌಟುಂಬಿಕ ಅಥವಾ ಮನೆಯ ಜವಾಬ್ದಾರಿಗಳಿಗೆ ಮಾತ್ರ ಸೀಮಿತವಲ್ಲ ಎಂಬುದನ್ನು ನ್ಯಾಯಪೀಠ ಒತ್ತಿ ಹೇಳಿದೆ.
ಎಸ್ಎಸ್ಸಿ ಎಂದರೆ?: ಎಸ್ಎಸ್ಸಿ ಮೂಲಕ ನೇಮಕಗೊಳ್ಳುವ ಅಧಿಕಾರಿಗಳಿಗೆ 10ರಿಂದ 14 ವರ್ಷಗಳ ಕಾಲ ಮಾತ್ರ ಸೇನೆಯಲ್ಲಿ ಕರ್ತವ್ಯ ನಿಭಾಯಿಸುವ ಅವಕಾಶವಿದೆ. 10 ವರ್ಷಗಳ ಸೇವೆ ಬಳಿಕ 3 ಆಯ್ಕೆಗಳಿರುತ್ತವೆ. ಪರ್ಮನೆಂಟ್ ಕಮಿಷನ್ಗೆ ಅರ್ಜಿ ಸಲ್ಲಿಸುವುದು ಅಥವಾ ನಿವೃತ್ತಿಯಾಗುವುದು ಅಥವಾ 4 ವರ್ಷಗಳಿಗೆ ಸೇವಾ ಅವಧಿ ವಿಸ್ತರಿಸುವುದು. 4 ವರ್ಷಗಳ ವಿಸ್ತರಣೆಯ ಅವಧಿಯ ಯಾವುದೇ ಸಂದರ್ಭದಲ್ಲೂ ಈ ಅಧಿಕಾರಿಗಳು ತಮ್ಮ ಹುದ್ದೆಯಿಂದ ನಿವೃತ್ತಿಯಾಗಬಹುದು. ಎಸ್ಎಸ್ಸಿಯಲ್ಲಿ ವ್ಯಕ್ತಿಯೊಬ್ಬ ಬ್ರಿಗೇಡಿಯರ್ ಶ್ರೇಣಿವರೆಗಿನ ಅಧಿಕಾರಿಯಾಗಬಹುದು. ಎಸ್ಎಸ್ಸಿಯಿಂದ ನಿವೃತ್ತಿಯಾಗುವ ವ್ಯಕ್ತಿ ಪಿಂಚಣಿ ಅಥವಾ ಮತ್ತಿತರ ಸರ್ಕಾರಿ ಸೌಲಭ್ಯಗಳಿಗೆ ಅರ್ಹನಿರುವುದಿಲ್ಲ.
ಪರ್ಮನೆಂಟ್ ಕಮಿಷನ್: ಸೇನೆಗೆ ಅಧಿಕಾರಿಗಳನ್ನು ನೇಮಕ ಮಾಡುವ ಸಂಸ್ಥೆಯೇ ಪರ್ಮನೆಂಟ್ ಕಮಿಷನ್. ಈ ಆಯೋಗದ ಮೂಲಕ ನೇಮಕಗೊಂಡವರು ನಿವೃತ್ತಿ ವಯಸ್ಸಿನ (60) ತನಕ ಸೇನೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಪಡೆದಿರುತ್ತಾರೆ. ಪರ್ಮನೆಂಟ್ ಕಮಿಷನ್ ಮೂಲಕ ಸೇನೆಗೆ ಬರಬೇಕೆಂದರೆ ನ್ಯಾಷನಲ್ ಡಿಫೆನ್ಸ್ ಅಕಾಡೆಮಿ, ಇಂಡಿಯನ್ ಮಿಲಿಟರಿ ಅಕಾಡೆಮಿ ಅಥವಾ ಆಫೀಸರ್ಸ್ ಟ್ರೇನಿಂಗ್ ಅಕಾಡೆಮಿ ಸೇರುವುದು ಅನಿವಾರ್ಯ. ಈ ಮೂಲಕ ನೇಮಕಗೊಂಡವರಿಗೆ ನಿವೃತ್ತಿ ಬಳಿಕ ಪಿಂಚಣಿ ಸಿಗಬೇಕೆಂದರೆ ಕನಿಷ್ಠ 20 ವರ್ಷಗಳಷ್ಟು ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕು. ಪರ್ಮನೆಂಟ್ ಕಮಿಷನ್ನಿಂದ ಸೇನೆಗೆ ಬಂದ ಅಧಿಕಾರಿ ಶಾರ್ಟ್ ಸರ್ವಿಸ್ ಕಮಿಷನ್ ವ್ಯಾಪ್ತಿಗೆ ತನ್ನನ್ನು ಸೇರಿಸಿ ಎಂದು ಕೇಳಿಕೊಳ್ಳುವಂತಿಲ್ಲ. ಒಂದುವೇಳೆ ನಿಗದಿತ ಅವಧಿಗೆ ಮುನ್ನ ನಿವೃತ್ತಿಯಾಗಬೇಕೆಂದಿದ್ದರೆ ಸೂಕ್ತ ಕಾರಣ ಹಾಗೂ ದಾಖಲೆಗಳನ್ನು ಸಲ್ಲಿಸಿ ಕರ್ತವ್ಯದಿಂದ ಹಿಂದೆ ಸರಿಯಬಹುದಾಗಿದೆ. ಸದ್ಯಕ್ಕೆ ಸೇನೆಗೆ ಮಹಿಳಾ ಅಧಿಕಾರಿಗಳನ್ನು ಶಾರ್ಟ್ ಸರ್ವಿಸ್ ಕಮಿಷನ್ ಮೂಲಕ ನೇಮಿಸಲಾಗುತ್ತಿದೆ. ತಮ್ಮನ್ನು ಪರ್ಮನೆಂಟ್ ಕಮಿಷನ್ಗೆ ಪರಿಗಣಿಸಬೇಕು ಎಂಬುದು ಅವರ ಬಹುಕಾಲದ ಬೇಡಿಕೆ ಆಗಿತ್ತು.
ಕೇಂದ್ರ ಏನು ಹೇಳಿತ್ತು: ಕೇಂದ್ರದ 2019ರ ನಿಯಮವಾಳಿಯು ಪರ್ಮನೆಂಟ್ ಕಮಿಷನ್ನಲ್ಲಿ ಮಹಿಳಾ ಅಧಿಕಾರಿಗಳು ಸ್ಟಾಫ್ ಪೋಸ್ಟಿಂಗ್ಗಳಿಗೆ ಸೀಮಿತವಾಗಿದ್ದರು. ಕಮಾಂಡ್ ಪೋಸ್ಟ್ಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇರಲಿಲ್ಲ. ಅಪಾರ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸಶಕ್ತತೆಯ ಅಗತ್ಯವಿರುವ ವಿಭಾಗಗಳಲ್ಲಿ (ಕಾಂಬಾಟ್) ಮಹಿಳೆಯರಿಗೆ ಅವಕಾಶ ನೀಡಲು ಅಸಾಧ್ಯ ಎಂದಿದ್ದ ಕೇಂದ್ರ, ಅವರ ಸೀಮಿತ ದೈಹಿಕ ಸಾಮರ್ಥ್ಯ ಹಾಗೂ ಕೆಲ ಕೌಟುಂಬಿಕ ವಿಷಯಗಳಿಂದಾಗಿ ಸೇನೆಯ ಕಠಿಣ ಸವಾಲು ಹಾಗೂ ಅಪಾಯಗಳನ್ನು ಎದುರಿಸಲು ಕಷ್ಟವಾದೀತು ಎಂದು ಅಭಿಪ್ರಾಯಪಟ್ಟಿತ್ತು. ಪುರುಷರಿಗೆ ಮುಖ್ಯವಾಗಿ ಗ್ರಾಮೀಣ ಭಾಗದಿಂದ ಬಂದ ಪುರುಷ ಸೇನಾನಿಗಳಿಗೆ ತಮ್ಮ ಯೂನಿಟ್ಗಳನ್ನು ಮಹಿಳಾ ಅಧಿಕಾರಿ ಮುನ್ನಡೆಸುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪಮಟ್ಟಿಗೆ ಕಷ್ಟವಾಗಬಹುದು ಎಂದಿತ್ತು. ಆದರೆ ಈ ವಾದ ತಳ್ಳಿಹಾಕಿರುವ ನ್ಯಾಯಪೀಠ, ಇಂಥದ್ದೊಂದು ಅವಕಾಶದಿಂದ ಮಹಿಳೆಯರನ್ನು ವಂಚಿತಗೊಳಿಸಿದ ನಿಮ್ಮ ಕ್ರಮ ಸಂವಿಧಾನದ ಆರ್ಟಿಕಲ್ 14 ಮತ್ತು 16ನ್ನು ಉಲ್ಲಂಘಿಸುತ್ತದೆ. ಮಹಿಳಾ ಅಧಿಕಾರಿಗಳು ಎಷ್ಟೇ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರಲಿ, ಪುರುಷರಂತೆ ಮಹಿಳೆಯರಿಗೂ ಪರ್ಮನೆಂಟ್ ಕಮಿಷನ್ ನಿಯಮಗಳು ಅನ್ವಯಿಸುತ್ತವೆ. ಕಮಾಂಡ್ ಹುದ್ದೆಗಳಿಂದ ಮಹಿಳೆಯರನ್ನು ಹೊರಗಿಡುವಂತಿಲ್ಲ. ಸಮರ್ಥ ಮಹಿಳಾ ಅಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ಸ್ಪಷ್ಟಪಡಿಸಿದೆ.