

ಲಂಡನ್: ಕರೊನಾ ಎಲ್ಲ ರೋಗಿಗಳಲ್ಲಿ ಒಂದೇ ರೀತಿಯ ಪರಿಣಾಮ ಬೀರುತ್ತಿಲ್ಲ. ಅದೆಷ್ಟೋ ಜನರಿಗೆ ರೋಗ ಲಕ್ಷಣವಿಲ್ಲದಿದ್ದರೂ ಸೋಂಕು ದೃಢವಾಗಿದೆ. ಆದರೆ ಈ ಮಹಿಳೆಯ ಪ್ರಕರಣ ಉಲ್ಟಾ. ರೋಗ ಲಕ್ಷಣವಿದ್ದರೂ ಸೋಂಕು ಪತ್ತೆಯಾಗಿರಲಿಲ್ಲ. ಆದರೆ ಸತ್ತ ಮೇಲೆ ಕರೊನಾದಿಂದಾಗಿಯೇ ಸತ್ತಿದ್ದಾಗಿ ವರದಿ ಬಂದಿದ್ದು ಕುಟುಂಬವೇ ಶಾಕ್ ಆಗಿದೆ.
ಬ್ರಿಟನ್ನ ಡೆಬ್ರಾ ಶಾ(56) ಹೆಸರಿನ ಮಹಿಳೆ ಆಪರೇಷನ್ ಒಂದರ ನಿಮಿತ್ತ ಆಸ್ಪತ್ರೆಗೆ ದಾಖಲಾಗಿದ್ದರು. ಆಕೆಗೆ ಆಪರೇಷನ್ ಮಾಡಿ, ಅದರಿಂದ ಗುಣಮುಖವಾಗುವ ಸಮಯದಲ್ಲಿ ಕರೊನಾ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿವೆ. ವಿಪರೀತ ಜ್ವರ, ಉಸಿರಾಟ ತೊಂದರೆಗಳು ಕಾಣಿಸಿಕೊಂಡಿವೆ. ಆ ಹಿನ್ನೆಲೆಯಲ್ಲಿ ಆಕೆಗೆ ಕರೊನಾ ಪರೀಕ್ಷೆ ಮಾಡಲಾಗಿದೆ. ಮೊದಲನೇ ವರದಿಯಲ್ಲಿ ಕರೊನಾ ನೆಗೆಟಿವ್ ಬಂದಿದೆ. ಸತತ 10 ದಿನಗಳ ಕಾಲ 10 ಬಾರಿ ಪರೀಕ್ಷೆ ಮಾಡಲಾಗಿದೆ. ಎಲ್ಲ ವರದಿಯಲ್ಲಿ ಆಕೆಗೆ ಕರೊನಾ ನೆಗೆಟಿವ್ ಬಂದಿದೆ.
ಆಪರೇಷನ್ ಮುಗಿದು 15 ದಿನಗಳಿಗೆ ಡೆಬ್ರಾ ಕೊನೆಯುಸಿರೆಳೆದಿದ್ದಾಳೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಡೆಬ್ರಾಗೆ ಕರೊನಾ ಇದ್ದಿದ್ದು, ಅದರಿಂದಲೇ ಸಾವನ್ನಪ್ಪಿರುವುದಾಗಿ ಬಂದಿದೆ. ಆದರೆ ಆಸ್ಪತ್ರೆಯಲ್ಲಿ ಆಕೆಯನ್ನು ಕೋವಿಡ್ ವಾರ್ಡ್ನ ಬದಲಾಗಿ ಸಾಮಾನ್ಯ ವಾರ್ಡ್ನಲ್ಲೇ ಇಡಲಾಗಿತ್ತು. ಪಿಪಿಇ ಕಿಟ್ ಇಲ್ಲದೆಯೇ ಆಕೆಯ ಸಂಬಂಧಿಗಳು ಆಕೆಯೊಂದಿಗಿದ್ದರು. ಈ ವಿಚಾರವಾಗಿ ಆಸ್ಪತ್ರೆಯ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಆಕೆಯ ಸಂಬಂಧಿಕರು ತಿಳಿಸಿದ್ದಾರೆ. (ಏಜೆನ್ಸೀಸ್)