ಈಕೆ ಜಗತ್ತು ನೋಡ್ತಿರೋದೇ 42ನೇ ವಯಸ್ಸಲ್ಲಿ! ಹೆತ್ತವರಿಂದಲೇ ನರಕ ಕಂಡ ಮಹಿಳೆ ಕಡೆಗೂ ಸಾವಿನಿಂದ ಬಚಾವ್​ | Women

ವಿಜಯವಾಣಿ (69)
Published on

ಪೊಲ್ಯಾಂಡ್​​: ಇದೊಂದು ಶಾಕಿಂಗ್ ಹಾಗೂ ವಿಚಿತ್ರ ಘಟನೆ ಎಂದರೆ ಖಂಡಿತ ತಪ್ಪಾಗಲಾರದು (Women Found). ತಂದೆ-ತಾಯಿಯೇ ದೇವರು. ಅವರಿಗಿಂತ ಮಿಗಿಲಾದದ್ದು ಏನೂ ಇಲ್ಲ ಎಂಬ ಮಾತಿದೆ. ಜನ್ಮಕೊಟ್ಟ ಪೋಷಕರು ನಮ್ಮ ಜೀವನದಲ್ಲಿ ಅತೀ ಮುಖ್ಯ. ಅವರಿಲ್ಲದ ಜೀವನ ಶೂನ್ಯ. ಇಡೀ ಜಗತ್ತಿನಲ್ಲಿ ಕೆಟ್ಟ ಮಕ್ಕಳನ್ನು ಹುಡುಕಬಹುದೇ ವಿನಃ ಕೆಟ್ಟ ಅಪ್ಪ-ಅಮ್ಮನನ್ನು ಹುಡುಕಲು ಸಾಧ್ಯವೇ ಇಲ್ಲ ಎಂದು ಹಲವರು ಹೇಳ್ತಾರೆ. ಆದರೆ, ಇಲ್ಲೊಂದು ಘಟನೆ ಅದನ್ನು ಸುಳ್ಳಾಗಿಸಿದೆ ಎಂಬುದೇ ಸದ್ಯ ಬೇಸರದ ಸಂಗತಿ.

ಪೊಲಾಂಡ್​ನಲ್ಲಿ 42ರ ಮಹಿಳೆಯೊಬ್ಬಳು ತಾನು 15ನೇ ವಯಸ್ಸಿನಲ್ಲಿದ್ದ ಸಂದರ್ಭದಲ್ಲಿ ತನ್ನ ಪೋಷಕರಿಂದಲೇ ಮನೆಯ ರೂಮ್​ನಲ್ಲಿ ಲಾಕ್​ ಆಗಿದ್ದು, ಮೂರು ದಶಕಗಳ ಬಳಿಕ ಪ್ರಪಂಚವನ್ನು ನೋಡುವ ಭಾಗ್ಯ ಪಡೆದುಕೊಂಡಿದ್ದಾಳೆ. ಅದು ಆಕೆಯ ಹೆತ್ತವರ ಕೃಪೆಯಿಂದಲ್ಲ. ಬದಲಿಗೆ ಪೊಲೀಸರ ಸಹಾಯದಿಂದ. 15ನೇ ವಯಸ್ಸಲ್ಲೇ ಮನೆಬಿಟ್ಟು ಓಡಿ ಹೋದ ಹುಡುಗಿ ಮಿರೆಲ್ಲ ಎಂದು ಸ್ಥಳೀಯರು ಭಾವಿಸಿದ್ದರು. ಆದರೆ, ಆಕೆ ತನ್ನ ಮನೆಯ ಕೊಠಡಿಯಲ್ಲೇ ಇಷ್ಟು ವರ್ಷಗಳ ಕಾಲ ಜೀವಂತವಾಗಿದ್ದಳು ಎಂಬ ಸಂಗತಿ ಇಲ್ಲಿಯವರೆಗೂ ಯಾರೊಬ್ಬರಿಗೂ ತಿಳಿದಿರಲಿಲ್ಲ. ಈ ವಿಚಾರ ಸದ್ಯ ನಿವಾಸಿಗಳನ್ನು ಅಕ್ಷರಶಃ ಬೆರಗಾಗಿಸಿದೆ.

'ನ್ಯೂಸ್​ 18' ವರದಿಯ ಪ್ರಕಾರ, ಮಿರೆಲ್ಲ (42) 1998ರಲ್ಲಿ ಅಂದರೆ ಆಕೆ 15ನೇ ವಯಸ್ಸಿನಲ್ಲಿ ಸಾರ್ವಜನಿಕರ ಕಣ್ಣಿನಿಂದ ಮರೆಯಾದಳು. ಬರೋಬ್ಬರಿ 27 ವರ್ಷಗಳ ಕಾಲ ಮಗಳನ್ನು ಆಕೆಯ ಪೋಷಕರು ರೂಮ್​ನಲ್ಲಿ ಕೂಡಿ ಹಾಕಿದ್ದರು ಎಂದು ವರದಿಯಾಗಿದೆ. ಗಂಡ-ಹೆಂಡತಿ ಮಧ್ಯೆ ಏನದು ಜಟಾಪಟಿ? ಎಂಬ ವಿಚಾರ ತಿಳಿಯಲು ಸ್ಥಳೀಯ ಪೊಲೀಸರು ಅವರಿದ್ದ ಅಪಾರ್ಟ್ಮೆಂಟ್​ಗೆ ಬಂದು, ಬಾಗಿಲು ತೆರೆಸಿದಾಗಲೇ ಅಸಲಿ ಪ್ರಪಂಚ ಏನು ಎಂಬುದು ತಿಳಿದಿದೆ. ಒಂದು ಸಣ್ಣ ಕೊಠಡಿಯಲ್ಲಿ ದುರ್ಬಲವಾಗಿ, ಚರ್ಮ ಮತ್ತು ಇತರೆ ಸೋಂಕಿನಿಂದ ಬಳಲುತ್ತಿದ್ದ ಮಿರೆಲ್ಲಳನ್ನು ಕಂಡ ಖಾಕಿ ಒಂದು ನಿಮಿಷ ದಂಗಾಗಿದೆ.

ಪೊಲೀಸರಿಗೆ ಮಾಹಿತಿ ಸಿಕ್ಕಿದ್ಹೇಗೆ?

ಅಸಲಿಗೆ, ಪೊಲೀಸರು ಮಿರೆಲ್ಲ ಬಗ್ಗೆ ಯಾವುದೇ ಮಾಹಿತಿಯನ್ನೂ ಪಡೆದಿರಲಿಲ್ಲ. ಅವರಿಗೆ ಈ ಹೆಸರಿನ ಮಹಿಳೆ ಇದ್ದಾಳೆ ಎಂಬ ಸುಳಿವೇ ಇರಲಿಲ್ಲ. ಆದರೆ, ಈ ವರ್ಷದ ಜುಲೈನಲ್ಲಿ ಯಾವುದೋ ವಿಚಾರಕ್ಕೆ ಮಿರೆಲ್ಲ ಪೋಷಕರು ಜಗಳ ಮಾಡಿಕೊಂಡಿದ್ದರು. ಕುಟುಂಬದ ಗಲಾಟೆ ಕುರಿತು ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ, ಘಟನೆ ಬಗ್ಗೆ ಮಾಹಿತಿ ಪಡೆಯಲು ದಂಪತಿ ಮನೆ ಪ್ರವೇಶಿಸಿದಾಗ ಈ ಶಾಕಿಂಗ್ ವಿಚಾರ ಬಯಲಾಗಿದೆ. ಮಹಿಳೆಯ ಪರಿಸ್ಥಿತಿ ನೋಡಿದ ಖಾಕಿ, ತಕ್ಷಣವೇ ಆಕೆಯನ್ನು ತುರ್ತು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿತು. ಅಸಲಿಗೆ ಕಳೆದ ಎರಡೂವರೆ ತಿಂಗಳಿನಿಂದ ಮಿರೆಲ್ಲ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಳೆ. ಸದ್ಯ ಸಾವಿನ ದವಡೆಯಿಂದ ಪಾರಾಗಿದ್ದಾಳೆ.

ವೈದ್ಯರ ಪ್ರಕಾರ, ಆಕೆ ಇನ್ನೂ ಒಂದಷ್ಟು ದಿನಗಳ ಕಾಲ ಬೆಳಕು ನೋಡದೆ, ಅದೇ ಪರಿಸ್ಥಿತಿಯಲ್ಲಿ ಇದಿದ್ರೆ ಖಂಡಿತ ಸಾವಿಗೆ ತುತ್ತಾಗುತ್ತಿದ್ದಳು ಎಂದು ಹೇಳಿದ್ದಾರೆ. ಪ್ರಸ್ತುತ, ವೈದ್ಯರ ತಂಡ ಮಿರೆಲ್ಲ ಆರೋಗ್ಯ ಚೇತರಿಸಿಕೊಳ್ಳುತ್ತಿದೆ ಎಂದು ಹೇಳಿದ್ದು, ಸಾವಿನಿಂದ ಬಚಾವ್ ಆಗಿದ್ದಾಳೆ ಎಂದು ಭರವಸೆ ನೀಡಿದ್ದಾರೆ. ಮಗಳ ಈ ಸ್ಥಿತಿಗೆ ನೀವ್ಯಾಕೆ ಕಾರಣರಾಗಿದ್ದೀರಿ? ಯಾಕಿಷ್ಟು ಕ್ರೂರ ಮನಸ್ಥಿತಿ? ಎಂದು ಮಿರೆಲ್ಲ ತಾಯಿಯನ್ನು ಪ್ರಶ್ನಿಸಿದರೆ, ಆಕೆ ನುಡಿದ ಮಾತುಗಳಲ್ಲಿ ಸತ್ಯತೆ ಮತ್ತು ಸ್ಪಷ್ಟತೆ ಇಲ್ಲವಾಗಿದೆ.

ಮಿರೆಲ್ಲ ತಾಯಿ ಹೇಳಿದ್ದೇನು?

ಯಾವ ಕಾರಣಕ್ಕೆ ಕತ್ತಲೆ ಕೋಣೆಗೆ ನೂಕಿದ್ದಾಗಿ ಬಾಯ್ಬಿಡದ ಮಿರೆಲ್ಲ ತಾಯಿ, ಅವಳನ್ನು ಆಗಾಗ್ಗೆ ಮನೆಯ ಹೊರೆಗೆ ಓಡಾಡಲು ಬಿಡ್ತಿದ್ದೆವು. ಸ್ನೇಹಿತರನ್ನು ಭೇಟಿಯಾಗಲು ಕಳುಹಿಸುತ್ತಿದ್ದೆವು ಎಂದರು. ಆಕೆಯ ರೂಮ್​ನಲ್ಲಿ ಬಾಲ್ಯದಲ್ಲಿದ್ದ ಗೊಂಬೆಗಳೇ ಏಕೆ ತುಂಬಿವೆ? ಹಾಸಿಗೆ ಏಕಷ್ಟು ಚಿಕ್ಕದಿದೆ? ಎಂಬ ಖಾಕಿ ಪ್ರಶ್ನೆಗಳ ಸರಮಾಲೆಗೆ ಉತ್ತರಿಸಿದ ಅವರು, ಅವೆಲ್ಲವನ್ನೂ ಕಸಕ್ಕೆ ಎಸೆಯಬೇಕು. ನನಗೆ ಸಮಯ ಸಿಕ್ಕಿರಲಿಲ್ಲ. ಹಾಗಾಗಿ, ಆ ಯಾವ ಕೆಲಸಗಳನ್ನು ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. ಸದ್ಯ ದಂಪತಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net