ಕಾಡಿನ ಕೆರೆಗಳಿಂದ ನೀರು ತರುತ್ತಿದ್ದಾರೆ ಮಹಿಳೆಯರು

03-AUG-GPT-3 ... WATER
ಗುಂಡ್ಲುಪೇಟೆ ತಾಲೂಕಿನ ಉಪಕಾರ ಗ್ರಾಮದ ಮಹಿಳೆಯರು ಕಾಡಿನೊಳಗಿನ ಕೆರೆಯಿಂದ ಮನೆಗಳಿಗೆ ನೀರು ಹೊತ್ತೊಯ್ಯುತ್ತಿರುವುದು.
Published on

ಗುಂಡ್ಲುಪೇಟೆ: ಕಳೆದ 20 ದಿನಗಳಿಂದ ಕಾಡಂಚಿನ ಉಪಕಾರ ಗ್ರಾಮಕ್ಕೆ ಕುಡಿಯುವ ನೀರಿನ ಸರಬರಾಜು ಇಲ್ಲದೆ ಮಹಿಳೆಯರು ತಮ್ಮ ಗೃಹಬಳಕೆಗೆ ವನ್ಯಜೀವಿಗಳ ಭೀತಿಯ ನಡುವೆಯೂ ಕಾಡಿನೊಳಗಿನ ಕೆರೆಗಳಿಂದ ನೀರು ತರುತ್ತಿದ್ದಾರೆ.

ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಉಪಕಾರ ಗ್ರಾಮಕ್ಕೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಬಂದ್ ಆಗಿದೆ. 20 ದಿನಗಳ ಹಿಂದೆ ಪೈಪ್‌ಲೈನ್ ಹಾದು ಹೋಗಿರುವ ಜಮೀನಿನವರು ನೆಲವನ್ನು ಸಮತಟ್ಟು ಮಾಡಿಸುವಾಗ ಪೈಪ್ ಕತ್ತರಿಸಿ ಹೋಗಿದೆ. ಅಲ್ಲದೆ ಗ್ರಾಮದಲ್ಲಿ ಕೊರೆಸಿರುವ ಕೊಳವೆ ಬಾವಿಯಲ್ಲಿಯೂ ಸಮರ್ಪಕ ನೀರು ದೊರಕದೆ ಕುಡಿಯುವ ನೀರಿನ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿಯು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುತ್ತಿದೆ. ಅದರೆ ಟ್ಯಾಂಕರಿನಲ್ಲಿ ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಜನರು ಕೂಲಿ ಕೆಲಸಕ್ಕೆ ಹೋಗುವುದರಿಂದ ಎಲ್ಲ ಮನೆಗಳವರಿಗೂ ನೀರು ದೊರಕದಂತಾಗಿದೆ. ಇದರಿಂದ ಮಹಿಳೆಯರು ತಮ್ಮ ಗೃಹಕೃತ್ಯಕ್ಕೆ ಅಗತ್ಯವಾದ ನೀರಿಗಾಗಿ ಕುಂದಕೆರೆ ವಲಯದ ಕಾಡಿನೊಳಗಿರುವ ಕೆರೆಗಳಿಗೆ ಹೋಗುತ್ತಿದ್ದಾರೆ.

ಮೊದಲೇ ಕಾಡಂಚಿನ ಗ್ರಾಮಗಳಲ್ಲಿ ವನ್ಯಜೀವಿಗಳ ಹಾವಳಿ ಹೆಚ್ಚಾಗಿದ್ದು ಕಾಡಿನೊಳಗೆ ನೀರು ತರಲು ಹೋಗುವ ಮಹಿಳೆಯರ ಜೀವ ಅಪಾಯಕ್ಕೆ ಸಿಲುಕುವಂತಾಗಿದೆ. ಆದ್ದರಿಂದ ಇನ್ನಾದರೂ ಸಂಬಂಧಿಸಿದವರು ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net