

ನವದೆಹಲಿ: ಕಳೆದ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರನ್ನರ್ಅಪ್ ಸ್ಥಾನಕ್ಕೆ ತೃಪ್ತಿಪಟ್ಟ ಭಾರತದ ಮಹಿಳಾ ಕ್ರಿಕೆಟ್ ತಂಡದ ಅಟಗಾರ್ತಿಯರು ಈಗ ತಮ್ಮ ತಮ್ಮ ಮನೆಗಳಲ್ಲಿ ಲಾಕ್ ಆಗಿದ್ದಾರೆ. ಇದರ ನಡುವೆಯೂ ತಂಡದ ಆಟಗಾರ್ತಿಯರು ತಮ್ಮ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದಕ್ಕೆ ಕಾರಣವಾಗಿರುವುದು ಆನ್ಲೈನ್ ಲುಡೋ ಗೇಮ್ ಹೌದು, ಈ ವಿಷಯವನ್ನು ತಂಡದ ಸ್ಟಾರ್ ಎಡಗೈ ಆರಂಭಿಕ ಆಟಗಾರ್ತಿ ಸ್ಮತಿ ಮಂದನಾ ಅವರೇ ಬಹಿರಂಗಪಡಿಸಿದ್ದಾರೆ.
‘ನಾವು ತಂಡದ ಆಟಗಾರ್ತಿಯರೆಲ್ಲರೂ ಈಗ ಆನ್ಲೈನ್ ಮೂಲಕ ಲುಡೋ ಪಂದ್ಯಗಳನ್ನು ಆಡುತ್ತೇವೆ. ಈ ಮೂಲಕ ಸಹ-ಆಟಗಾರ್ತಿಯರೆಲ್ಲರೂ ಉತ್ತಮ ಬಾಂಧವ್ಯವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ’ ಎಂದು ಸೀಮಿತ ಓವರ್ ತಂಡದ ಉಪನಾಯಕಿಯೂ ಆಗಿರುವ ಮುಂಬೈ ಆಟಗಾರ್ತಿ ಸ್ಮತಿ, ಬಿಸಿಸಿಐ ಸೋಮವಾರ ಟ್ವಿಟರ್ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಹೇಳಿದ್ದಾರೆ.
ಫಿಟ್ ಆಗಿ ಉಳಿಯುವುದಕ್ಕೆ ಮನೆಯಲ್ಲೇ ವರ್ಕ್ಔಟ್ ಮಾಡುತ್ತಿರುವುದಾಗಿ ಹೇಳಿರುವ 23 ವರ್ಷದ ಸ್ಮತಿ, ‘ಫಿಟ್ ಆಗಿ ಉಳಿಯುವುದು ಪ್ರಮುಖವಾದುದು. ಲಾಕ್ಡೌನ್ ನಡುವೆಯೂ ನಾನು ಅದರತ್ತ ಗಮನಹರಿಸಿರುವೆ. ಟ್ರೇನರ್ ಜತೆಗೆ ನಿಕಟ ಸಂಪರ್ಕದಲ್ಲಿರುವೆ. ಅವರು ನಮ್ಮ ವರ್ಕ್ಔಟ್ ಬಗ್ಗೆ ಸಲಹೆ-ಸೂಚನೆಗಳನ್ನು ನೀಡುತ್ತಾರೆ’ ಎಂದಿದ್ದಾರೆ. ಈ ವೇಳೆ ಅಡುಗೆ ಮತ್ತು ಇತರ ಮನೆಕೆಲಸಗಳಲ್ಲೂ ಅಮ್ಮನಿಗೆ ನೆರವಾಗುತ್ತಿದ್ದು. ಸಹೋದರನಿಗೆ ಕೀಟಲೆ ಮಾಡುವುದೇ ನೆಚ್ಚಿನ ಟೈಮ್ಾಸ್ ಕೆಲಸ ಎಂದು ನಗುತ್ತಾರೆ. ಮಾಜಿ ವಿಶ್ವ ನಂ. 1 ಬ್ಯಾಟುಗಾರ್ತಿ, ದಿನದಲ್ಲಿ ಕನಿಷ್ಠ 10 ಗಂಟೆಯನ್ನು ನಿದ್ದೆಯಲ್ಲಿ ಕಳೆಯುತ್ತಿದ್ದೇನೆ ಎಂದಿದ್ದಾರೆ.