ವಿದೇಶಿ ಮಹಿಳೆಗೆ ಸೇರಿದ ಕೋಟ್ಯಂತರ ರೂ ಹಣ ವರ್ಗಾವಣೆಯಲ್ಲಿ ಭಾರತೀಯನಿಗೆ ವಂಚನೆ

Published on

ಚಿಕ್ಕಬಳ್ಳಾಪುರ: ನನಗೆ ಮಕ್ಕಳಿಲ್ಲ. ಈಗಾಗಲೇ ಪತಿ ಮೃತಪಟ್ಟಿದ್ದಾರೆ. ನನಗೆ ಕ್ಯಾನ್ಸರ್ ಕಾಯಿಲೆ. ಸಾವು ಹತ್ತಿರ ಇದೆ. ಇದಕ್ಕೆ ನನ್ನ ಬಳಿ ಇರುವ 3.9 ಮಿಲಿಯನ್ ಯುಎಸ್ ಡಾಲರ್ ಹಣ ನಿಮ್ಮ ಖಾತೆಗೆ ಜಮಾ ಮಾಡುತ್ತೇನೆ. ಇದರಲ್ಲಿ ಶೇ.70 ರಷ್ಟು ಹಣ ಬಡವರಿಗೆ ಮತ್ತು ಶೇ.30 ರಷ್ಟು ನಿಮಗೆ ಎಂದಳು ವಿದೇಶಿ ಮಹಿಳೆ. ಈಕೆಯನ್ನು ನಂಬಿದ ವೃದ್ಧ ತೆರಿಗೆ ಹಣ ಕಟ್ಟಿದ. ಆದರೆ, ಹಣ ವರ್ಗಾವಣೆಯಾಗಲಿಲ್ಲ .

ಇದು ಗೌರಿಬಿದನೂರು ನಗರದ ವಿವಿಪುರಂನ ನಿವೃತ್ತ ಬಿಎಸ್ಎನ್ಎಲ್ ಮಹಮದ್ ಅಲ್ತಾಫ್ (60) ಎಂಬುವವರನ್ನು ವಿದೇಶಿ ಮಹಿಳೆಯ ಹೆಸರಿನಲ್ಲಿ ವಂಚಿಸಿದ ಪರಿ. ಇತ್ತೀಚೆಗೆ ಮೊಬೈಲ್ ಗೆ ಸಂದೇಶವನ್ನು ಕಳುಹಿಸಿದ ಅಪರಿಚಿತ ಮಹಿಳೆಯು ಕ್ಯಾನ್ಸರ್ ಕತೆಯನ್ನು ಹೇಳಿದ್ದಾಳೆ. ನಾನು ಮೃತಪಟ್ಟರೆ ನನ್ನ ಹಣ ನನ್ನ ಸಂಬಂಧಿಕರ ಪಾಲಾಗುತ್ತದೆ. ಇದು ನನಗೆ ಇಷ್ಟವಿಲ್ಲ. ನನ್ನ ಹಣವು ಬಡವರಿಗೆ ಸೇರಬೇಕು. ಇದಕ್ಕೆ 3.9 ಮಿಲಿಯನ್ ಯುಎಸ್ ಡಾಲರ್ ಹಣವನ್ನು ನಿಮ್ಮ ಖಾತೆಗೆ ಜಮಾ ಮಾಡುತ್ತೇನೆ ಎಂಬುದಾಗಿ ಹೇಳಿದ್ದಾಳೆ. ಇದಾದ ಕೆಲವೇ ದಿನಗಳಿಗೆ ಆರ್ ಬಿಐ ಅಧಿಕಾರಿ ಹೆಸರಿನಲ್ಲಿ ಮೊಬೈಲ್ ಕರೆ ಬಂದಿದೆ. ಬ್ಯಾಂಕ್ ಖಾತೆಗೆ ಯುಎಸ್ ಡಾಲರ್ ಹಣ ಜಮಾ ಆಗಿದಕ್ಕೆ ಹಣ ವರ್ಗಾವಣೆ ಶುಲ್ಕ ಮತ್ತು ತೆರಿಗೆಗೆ ಪಾವತಿಸಲು ತಿಳಿಸಲಾಗಿದೆ. ಇದಕ್ಕೆ ಅನುಗುಣವಾಗಿ ಮೊದಲು 30 ಸಾವಿರ ರೂ ಜಮಾಗೊಳ್ಳುತ್ತಿದ್ದಂತೆ ಮತ್ತೆ 2.99 ಲಕ್ಷ ರೂ ಕೇಳಲಾಗಿದೆ. ಇದರಿಂದ ಅನುಮಾನಗೊಂಡು ಪರಿಶೀಲಿಸಿದಾಗ ವಂಚನೆ ಮಾಡುತ್ತಿರುವುದು ಗೊತ್ತಾಗಿದೆ.

ಅಪರಾಧ ಪತ್ತೆ ದಳ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದೆ. ಇದರ ನಡುವೆ ಲಾಟರಿ ಗೆಲುವು, ಹಣ ಜಮಾ ಹೆಸರಿನಲ್ಲಿ ಅಮಾಯಕರನ್ನು ವಂಚಿಸಿ, ಹಣವನ್ನು ಪಡೆದುಕೊಳ್ಳುತ್ತಿರುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇವೆ. ಆದರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ವಂಚಕರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸವೂ ಆಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net