

| ಅವಿನಾಶ ಮೂಡಂಬಿಕಾನ ಬೆಂಗಳೂರು
ಕೋವಿಡ್ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿರುವ ಸಂದರ್ಭದಲ್ಲೇ ರಾಜ್ಯ ಸೈಬರ್ ವಂಚಕರ ಸುಳಿಯಲ್ಲಿ ಸಿಲುಕಿ ಪರದಾಡುವಂತಾಗಿದೆ. ಪ್ರಕರಣ ಭೇದಿಸಲು ಬೇಕಾದ ಮೂಲಸೌಕರ್ಯವಿಲ್ಲದ ಕಾರಣ ವಂಚಕರ ಪತ್ತೆ ಸವಾಲಿನ ಕೆಲಸವಾಗಿದೆ. ಇದರಿಂದಾಗಿ ರಾಜ್ಯದಲ್ಲಿ 50 ಸಾವಿರಕ್ಕೂ ಅಧಿಕ ಗಂಭೀರ ಸೈಬರ್ ಅಪರಾಧ ಕೇಸ್ಗಳು ಇತ್ಯರ್ಥವಾಗದೆ ಉಳಿದಿವೆ. ಅದರಲ್ಲೂ ಸೈಬರ್ ವಂಚಕರ ಟಾರ್ಗೆಟ್ ಮಹಿಳೆಯರೇ ಆಗಿರುವುದು ಮತ್ತಷ್ಟು ಕಳವಳ ಮೂಡಿಸಿದೆ.
ಕಳೆದ 18 ತಿಂಗಳಲ್ಲಿ ದೇಶಾದ್ಯಂತ 3,17,439 ಸೈಬರ್ ಅಪರಾಧಗಳು ವರದಿಯಾಗಿವೆ. ಈ ಪೈಕಿ ಕರ್ನಾಟಕದಲ್ಲಿ 21,562 ಪ್ರಕರಣ ದಾಖಲಾದರೆ, ಮಹಾರಾಷ್ಟ್ರದಲ್ಲಿ 50,806 ಅತೀ ಹೆಚ್ಚು ಕೇಸ್ ದಾಖಲಾಗಿವೆ. ದೇಶದಲ್ಲಿ ವಾರ್ಷಿಕವಾಗಿ ಅಂದಾಜು 4 ಸಾವಿರ ಕೋಟಿ ರೂ. ಗೂ ಅಧಿಕ ಹಣ ಸೈಬರ್ ಕಳ್ಳರ ಪಾಲಾಗುತ್ತಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 7 ರಿಂದ 10 ಸಾವಿರ ಸೈಬರ್ ವಂಚನೆ ಪ್ರಕರಣಗಳು ಠಾಣೆ ಮೆಟ್ಟಿಲೇರುತ್ತವೆ. ಬೆಂಗಳೂರಿನಲ್ಲಿ ಹೆಚ್ಚು ಸೈಬರ್ ಕ್ರೖೆಂ ಕೇಸ್ ದಾಖಲಾಗುತ್ತಿದೆ.
ಉ.ಭಾರತ ನೆಲೆ: ಸೈಬರ್ ವಂಚಕರು ಉತ್ತರ ಭಾರತ ಹಾಗೂ ವಿದೇಶಗಳಲ್ಲಿ ಕುಳಿತು ಎಲ್ಲೂ ತಮ್ಮ ಸುಳಿವು ಸಿಗದಂತೆ, ಮೂಲ ದಾಖಲೆ ಬಿಟ್ಟುಕೊಡದಂತೆ ಅಪರಾಧ ಎಸಗುತ್ತಾರೆ.
ಗೋಲ್ಡನ್ ಅವರ್ ವ್ಯವಸ್ಥೆ: ಸೈಬರ್ ವಂಚನೆಯಾದ 1 ಗಂಟೆ ಅವಧಿ ಗೋಲ್ಡನ್ ಅವರ್ ಆಗಿರಲಿದೆ. ಆ ಅವಧಿಯಲ್ಲಿ ‘100’ಗೆ ಕರೆ ಮಾಡಿ ಮಾಹಿತಿ ನೀಡಿದರೆ, ಹಣ ಜಮೆ ಮಾಡಿರುವ ಖಾತೆ ಫ್ರೀಜ್ ಮಾಡಲು ಅವಕಾಶಗಳಿವೆ.