ನಾರಿಶಕ್ತಿ ಪ್ರಕಾಶ, ಬೇಕಿದೆ ಅವಕಾಶ: ವಿಧಾನಸಭೆ ಚುನಾವಣೆ ಟಿಕೆಟ್​ಗಾಗಿ ಕೈ-ಕಮಲದಲ್ಲಿ ಮಹಿಳೆಯರ ದಂಡು

Congress
Published on

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು

ಮಹಿಳೆಯರು ಇಂದು ಎಲ್ಲ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮನಾಗಿ ಬೆಳೆದಿದ್ದರೂ, ರಾಜಕೀಯವಾಗಿ ಅವರಿಗೆ ಪ್ರಾತಿನಿಧ್ಯ ತುಸು ಕಡಿಮೆಯೇ. ಸ್ಥಳೀಯ ಸಂಸ್ಥೆಗಳಲ್ಲಿ ಅವಕಾಶ ಸಿಕ್ಕಿದೆಯಾದರೂ, ವಿಧಾನಸಭೆ, ಲೋಕಸಭೆ ಚುನಾವಣೆಗಳ ವೇಳೆ ಮಹಿಳೆಯರನ್ನು ಕಡೆಗಣಿಸಲಾಗುತ್ತಿದೆ. ಆದರೆ ರಾಜ್ಯದಲ್ಲಿ ಈ ವರ್ಷ ಮಹಿಳೆಯರು ಹೆಚ್ಚು ಸದ್ದು ಮಾಡುತ್ತಿದ್ದು, ಕಾಂಗ್ರೆಸ್​ನಿಂದ ಅಖಾಡಕ್ಕಿಳಿಯಲು 100ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಅರ್ಜಿ ಪಡೆದುಕೊಂಡಿದ್ದಾರೆ! ಪಕ್ಷದ ಪ್ರಮುಖ ನಾಯಕರು ಒಪ್ಪಿಸಿ ಕಣಕ್ಕಿಳಿಯುವ ತರಾತುರಿ ಅನೇಕರಲ್ಲಿ ಕಾಣಿಸಿದೆ.

ಮುಂಬರುವ ವಿಧಾನಸಭಾ ಚುನಾವಣೆಗೆ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಆರಿಸುವ ಕಸರತ್ತು ಆರಂಭಿಸಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ 100ಕ್ಕಿಂತ ಹೆಚ್ಚು ಸ್ಥಾನಗಳಿಗೆ ಡಿಸೆಂಬರ್ ಒಳಗಾಗಿ ಅಭ್ಯರ್ಥಿಗಳನ್ನು ಪ್ರಕಟಿಸುವ ಉಮೇದಿನಲ್ಲಿದ್ದು, ಬಿಜೆಪಿ ತೆರೆಮರೆಯ ಪ್ರಯತ್ನ ನಡೆಸುತ್ತಿದೆ.

ಈ ಬೆಳವಣಿಗೆಯ ನಡುವೆ ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳಲ್ಲಿ ಅವಕಾಶ ನೀಡಬೇಕೆಂಬ ಚರ್ಚೆ ಬಲವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲು ಇರುವಂತೆ ವಿಧಾನಸಭೆ ಚುನಾವಣೆಯಲ್ಲೂ ಮಹಿಳಾ ಮೀಸಲು ಕೊಡಬೇಕೆಂಬ ವಾದವಿದ್ದರೂ ರಾಜಕೀಯ ಪಕ್ಷಗಳು ಆಸಕ್ತಿ ತೋರಿಲ್ಲ. ಮೀಸಲು ನಿಗದಿ ಮಾಡುವ ಕಾನೂನು ಇಲ್ಲದಿರುವ ಕಾರಣ ಮೂರು ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡುವ ವಿಷಯದಲ್ಲೂ ಅಷ್ಟಾಗಿ ಗಮನಹರಿಸಿಲ್ಲ.

ಈ ವಿಚಾರದಲ್ಲಿ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪಾ ಅಮರನಾಥ್, ಕಳೆದ ಚುನಾವಣೆಯಲ್ಲಿ ನಮ್ಮ ಪಕ್ಷದಿಂದ 15 ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಅವಕಾಶ ಸಿಕ್ಕಿತ್ತು. ಈ ಬಾರಿ ಹೆಚ್ಚು ಸ್ಥಾನ ಕೊಡಿ ಎಂದು ದನಿ ಎತ್ತಿದ್ದೇವೆ. ನಮ್ಮ ದನಿಗೆ ಪೂರಕವಾಗಿ ನಮ್ಮ ನಾಯಕರಾದ ರಾಹುಲ್ ಗಾಂಧಿಕೂಡ ಮಹಿಳೆಯರಿಗೆ ಆದ್ಯತೆ ಕೊಡಬೇಕೆಂದಿದ್ದಾರೆ, ರಾಜ್ಯ ನಾಯಕರು ಹೆಚ್ಚು ಕಡೆ ಅವಕಾಶ ಮಾಡಿಕೊಡುವ ಬಗ್ಗೆ ಚಿಂತನೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆಂದರು. ಇದು ಕಾಂಗ್ರೆಸ್ ಪಕ್ಷ ಮಾತ್ರವಲ್ಲ ಎಲ್ಲ ಪಕ್ಷಗಳು ಮಹಿಳೆಯರಿಗೆ ಹೆಚ್ಚಿನ ಸ್ಥಾನಗಳಲ್ಲಿ ಅವಕಾಶ ಕೊಡಬೇಕು. ಕಾನೂನಿನಲ್ಲಿ ಮೀಸಲು ಅವಕಾಶ ಇಲ್ಲ ಎಂದು ಮಹಿಳೆಯರಿಗೆ ಸ್ಪರ್ಧೆಗೆ ಅವಕಾಶ ಕೊಡಬಾರದೆಂದೇನು ಇಲ್ಲ. ಅರ್ಧದಷ್ಟು ಮಹಿಳಾ ಮತದಾರರೇ ಇದ್ದು ಅವರನ್ನು ಪ್ರತಿನಿಧಿಸಲು ಮಹಿಳೆಯರಿಗೆ ಅವಕಾಶ ಕೊಡಬೇಕೆಂಬುದು ನಮ್ಮ ಆಗ್ರಹ ಎಂದರು.

ಅನೇಕ ಮಹಿಳೆಯರು ಅವಕಾಶ ಕೊಡುವಂತೆ ನಮ್ಮ ಬಳಿ ಬಂದಿದ್ದರು. ಕೆಲವೇ ದಿನಗಳಲ್ಲಿ ಒಂದು ಪಟ್ಟಿಮಾಡಿಕೊಂಡು ಪಕ್ಷದ ಸಭೆಯಲ್ಲಿ ಅದನ್ನು ಪ್ರಸ್ತಾಪಿಸುತ್ತೇವೆ. | ಗೀತಾ ವಿವೇಕಾನಂದ ಮಹಿಳಾ ಮೋರ್ಚಾ ಅಧ್ಯಕ್ಷೆ

ನಾರಿಯರ ಚುನಾವಣೆ ಸ್ವಾರಸ್ಯ: 2018ರ ವಿಧಾನಸಭೆ ಚುನಾವಣೆಯಲ್ಲಿ ಒಟ್ಟು 134 ಮಂದಿ ಮಹಿಳೆಯರು ಕಣದಲ್ಲಿದ್ದರು. ಪಕ್ಷೇತರರು ಹೆಚ್ಚು ಮಂದಿ ಇದ್ದು ಬಹುತೇಕರು ಠೇವಣಿ ಕಳೆದುಕೊಂಡರು. ಪ್ರಸ್ತುತ ಕಾಂಗ್ರೆಸ್ ಆರು, ಬಿಜೆಪಿಯ 3 ಹಾಗೂ ಜೆಡಿಎಸ್​ನ ಒಬ್ಬರು ಮಹಿಳಾ ಶಾಸಕಿಯರು ವಿಧಾನಸಭೆಯಲ್ಲಿದ್ದಾರೆ. 65 ವರ್ಷ ಇತಿಹಾಸದ ದಾಖಲೆ ತಿರುವಿಹಾಕಿದರೆ ಒಟ್ಟಾರೆ 100 ಮಹಿಳೆಯರು ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಮಾತಲ್ಲಷ್ಟೇ, ಕೃತಿಯಲ್ಲಿಲ್ಲ: ಮಹಿಳೆಯರಿಗೆ ಪ್ರಾತಿನಿಧ್ಯ ನೀಡಲಾಗುತ್ತದೆ ಎಂದು ರಾಜಕೀಯ ಪಕ್ಷಗಳು ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆಕೊಡುತ್ತಲೇ ಬಂದಿವೆ. ಆದರೆ, ಮೀಸಲು ನಿಗದಿ ಮಾಡುವ ಗೋಜಿಗೆ ಹೋಗಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲು ನಿಗದಿ ಪ್ರಮಾಣ ಶೇ.50ಕ್ಕೆ ಏರಿಕೆಯಾಗಿದ್ದು, ಶೇ.50 ಸ್ಥಳೀಯ ಸಂಸ್ಥೆ ಜನ ಪ್ರತಿನಿಧಿಗಳು ಮಹಿಳೆಯರೇ ಆಗಿರುತ್ತಾರೆಂಬುದು ವಿಶೇಷ. ಇದೇ ತೀರ್ವನವನ್ನು ವಿಧಾನಸಭೆ ವಿಚಾರದಲ್ಲಿ ತೆಗೆದುಕೊಳ್ಳಲು ಆಡಳಿತಾರೂಢ ಪಕ್ಷ ಆಸಕ್ತಿ ತೋರಿಸಿಲ್ಲ, ವಿರೋಧ ಪಕ್ಷ ಒತ್ತಾಯಿಸಲಿಲ್ಲ.

ಮುಂದಿನ ಚುನಾವಣೆಗೆ ಪ್ರಭಾವಿ ಹೆಸರುಗಳು

1. ಐಶ್ವರ್ಯ ಮಹದೇವ್ ಕೆ.ಆರ್.ನಗರ (ಕಾಂಗ್ರೆಸ್)

2. ಲಕ್ಷ್ಮೀ ಅಶ್ವಿನ್ ಗೌಡ ಮಂಡ್ಯ (ಬಿಜೆಪಿ)

3. ಭವಾನಿ ರೇವಣ್ಣ ಹಾಸನ (ಜೆಡಿಎಸ್)

4. ಕರಿಯಮ್ಮ ದೇವದುರ್ಗ (ಜೆಡಿಎಸ್)

5. ತೇಜಸ್ವಿನಿ ಅನಂತ ಕುಮಾರ್ ಬಸವನಗುಡಿ (ಬಿಜೆಪಿ)

6. ಸೋನಾಲಿ ಶರಣೊಬತ್ ಖಾನಾಪುರ (ಬಿಜೆಪಿ)

7. ಗೀತಾ ಶಿವರಾಮ್ ದಾಸರಹಳ್ಳಿ (ಕಾಂಗ್ರೆಸ್)

ಮುಖ್ಯಾಂಶ

  • ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷವು ಗೆಲ್ಲುವ ಸಾಮರ್ಥ್ಯ ಇರುವವರಿಗೆ ಮಣೆ ಹಾಕುವುದರಿಂದ ಮಹಿಳೆಯರು ಅವಕಾಶ ವಂಚಿತ.
  • ಮಹಿಳೆಯರಿಗೆ ಕನಿಷ್ಠ ಪ್ರಮಾಣದಲ್ಲಿ ಟಿಕೆಟ್ ಕೊಟ್ಟರೆ ಸಾಕೆಂಬ ಪ್ರಮುಖರ ಧೋರಣೆಯು ಹೆಚ್ಚಿನವರಿಗೆ ಅವಕಾಶ ತಪ್ಪಿಸುತ್ತಿದೆ.
  • ಚುನಾವಣೆ ಎದುರಿಸುವುದು ಮಹಿಳೆಯರಿಗೆ ಕಷ್ಟವಾಗಲಿದೆ ಎಂದು ಆಯ್ಕೆಗಾರರ ಅಭಿಪ್ರಾಯಗಳು ಮುಳುವಾಗುತ್ತಿದೆ.
  • ಸೋಲಬಹುದಾದ ಕ್ಷೇತ್ರಗಳಲ್ಲಿ ಗುರುತಿಸಿ ಅಲ್ಲಿ ಅವಕಾಶ ನೀಡಿ ಮಹಿಳಾ ಕೋಟಾದ ಟಿಕೆಟ್ ಹಂಚುವ ನಿಲುವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net