ಮೂವರು ಮಕ್ಕಳೊಂದಿಗೆ ಕಾಲುವೆಗೆ ಜಿಗಿದ ತಾಯಿ; ಯಾರೊಬ್ಬರೂ ಬದುಕುಳಿಯದಂತೆ ಬಟ್ಟೆ ಕಟ್ಟಿಕೊಂಡು ಸಾವಿಗೆ ಶರಣು | Woman Suicide

ವಿಜಯವಾಣಿ (53)
Published on

Woman Suicide: ಪತಿಯೊಂದಿಗೆ ಉಂಟಾದ ಕಲಹದಿಂದ ತೀವ್ರ ಮನನೊಂದ ಮಹಿಳೆ, ತನ್ನ ಮೂವರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣಬಿಟ್ಟ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬಂದಾದಲ್ಲಿ ವರದಿಯಾಗಿದೆ.

ಶನಿವಾರ (ಆ.09) ಬಂದಾ ಜಿಲ್ಲೆಯ ರಿಸೌರಾ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಮೃತ ಮಹಿಳೆಯನ್ನು ರೀನಾ ಮತ್ತು ಆಕೆಯ ಮೂರು ಮಕ್ಕಳಾದ ಹಿಮಾಂಶು (9), ಅನ್ಶಿ (5) ಮತ್ತು ಪ್ರಿನ್ಸ್ (3) ಎಂದು ಗುರುತಿಸಲಾಗಿದೆ. ಶುಕ್ರವಾರ ತಡರಾತ್ರಿ ಕೌಟುಂಬಿಕ ಸಮಸ್ಯೆಗೆ ಸಂಬಂಧಿಸಿದಂತೆ ರೀನಾ ತನ್ನ ಪತಿ ಅಖಿಲೇಶ್ ಜೊತೆ ಜಗಳವಾಡಿದ್ದಾಳೆ. ಪತಿ-ಪತ್ನಿ ಜಗಳ ತಾರಕಕ್ಕೇರಿದ ಬೆನ್ನಲ್ಲೇ ಗಂಡನ ಅರಿವಿಗೆ ಬಾರದಂತೆ ಮಕ್ಕಳೊಂದಿಗೆ ಮನೆ ಬಿಟ್ಟಿದ್ದಳು ಎಂದು ಹೇಳಲಾಗಿದೆ.

ಕಾಲುವೆಯ ದಡದ ಬಳಿ ಹುಡುಕಾಟ ನಡೆಸಿದ ಕುಟುಂಬಕ್ಕೆ ಆಕೆಯ ಬಟ್ಟೆ, ಬಳೆ, ಚಪ್ಪಲಿ ಮತ್ತು ಇತರ ವಸ್ತುಗಳು ಪತ್ತೆಯಾಗಿವೆ. ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ. ರಾತ್ರಿಯಲ್ಲಿ ಮೂರು ಮಕ್ಕಳೊಂದಿಗೆ ಮನೆಬಿಟ್ಟು ಹೋದ ಮಹಿಳೆ, ಮಕ್ಕಳು ಸಾವಿನಿಂದ ಬಚಾವ್ ಆಗಬಾರದು ಎಂಬ ನಿಟ್ಟಿನಲ್ಲಿ, ತನ್ನನ್ನು ಸೇರಿಸಿ ಬಟ್ಟೆಯಿಂದ ಕಟ್ಟಿಕೊಂಡು ಕಾಲುವೆಗೆ ಹಾರಿರುವುದು ಮೃತದೇಹವನ್ನು ವಶಪಡಿಸಿಕೊಂಡಾಗ ತಿಳಿದುಬಂದಿದೆ.

"ಕಾಲುವೆಯ ನೀರಿನ ಮಟ್ಟವನ್ನು ಕಡಿಮೆ ಮಾಡಿ ಈಜುಗಾರರನ್ನು ಮೃತದೇಹಗಳ ಶೋಧಕ್ಕಾಗಿ ನಿಯೋಜಿಸಿದ್ದೆವು. 5-6 ಗಂಟೆಗಳ ನಿರಂತರ ಹುಡುಕಾಟದ ಬಳಿಕ ಮಹಿಳೆ ಮತ್ತು ಆಕೆಯ ಮೂವರು ಮಕ್ಕಳ ಶವಗಳು ಪತ್ತೆಯಾಗಿವೆ. ಅವುಗಳನ್ನು ಬಟ್ಟೆಯಿಂದ ಒಟ್ಟಿಗೆ ಕಟ್ಟಲಾಗಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ" ಎಂದು ಬಂದಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ಹೇಳಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net