

ಮೈಸೂರು: ಸಾಮಾನ್ಯವಾಗಿ ಯಾವುದೇ ಸಿನಿಮಾಗಳು ಬಿಡುಗಡೆಯಾದ ದಿನ ಚಿತ್ರಮಂದಿರದ ಮುಂದೆ ಮಾಧ್ಯಮ ಪ್ರತಿನಿಧಿಗಳು ಬಂದು ಚಿತ್ರ ಹೇಗಿದೆ ಎಂದು ಪ್ರೇಕ್ಷಕರ ಅಭಿಪ್ರಾಯಗಳನ್ನು ಕೇಳುವುದು ಸಹಜ. ಅದೇ ರೀತಿ ಮೈಸೂರಿನ ಸಂಗಮ್ ಚಿತ್ರಮಂದಿರದಲ್ಲಿ 'ಟೋಬಿ' ಹೇಗಿದೆ ಎಂದು ಯುಟ್ಯೂಬ್ ಚಾನೆಲ್ ಪ್ರತಿನಿಧಿಯೊಬ್ಬರು ಚಿತ್ರ ವೀಕ್ಷಿಸಿ ಹೊರಬಂದ ಮಹಿಳೆಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ 'ಅವರು ಚೆನ್ನಾಗಿಲ್ಲ' ಎಂದು ಹೇಳಿದ್ದಾರೆ. ಆದರೆ ಇದನ್ನು ಕೇಳಿಸಿಕೊಂಡ ಅಲ್ಲಿದ್ದ ವ್ಯಕ್ತಿಯೊಬ್ಬ ಆ ಮಹಿಳೆಯನ್ನು ನಿಂದಿಸಿ, ಹಲ್ಲೆಗೆ ಮುಂದಾಗಿದ್ದಾನೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
ಏನಿದು ಘಟನೆ?
ನಟ ರಾಜ್ ಬಿ ಶೆಟ್ಟಿ ನಟನೆಯ 'ಟೋಬಿ' ಚಿತ್ರ ಬಹಳ ನಿರೀಕ್ಷೆಯೊಂದಿಗೆ ಚಿತ್ರಮಂದಿರಗಳ ಅಂಗಳಕ್ಕೆ ಬಂದಿದೆ. ಆದರೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಚಿತ್ರ ವೀಕ್ಷಿಸಿ ಚಿತ್ರಮಂದಿರದಿಂದ ಬಂದ ಮಹಿಳೆಯೊಬ್ಬರು ಯುಟ್ಯೂಬ್ ಚಾನೆಲ್ ಒಂದಕ್ಕೆ ಪ್ರತಿಕ್ರಿಸುವಾಗ ‘ಚಿತ್ರ ಚೆನ್ನಾಗಿಲ್ಲ’ ಎಂದು ಹೇಳಿದ್ದಾರೆ. ಅದನ್ನು ಕೇಳಿಸಿಕೊಂಡ ವ್ಯಕ್ತಿಯೋರ್ವ "ಕನ್ನಡ ಸಿನಿಮಾ ಚೆನ್ನಾಗಿಲ್ಲ ಅಂತೀಯಲ್ಲ...'' ಎಂದು ಅವಾಚ್ಯ ಪದಗಳಿಂದ ನೂರಾರು ಜನರ ಮುಂದೆ ನಿಂದಿಸಿ ಹಲ್ಲೆಗೆ ಮುಂದಾದ ಘಟನೆ ನಡೆದಿದೆ.
ಈ ಘಟನೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿದ ಚಿತ್ರಮಂದಿರದ ಮ್ಯಾನೇಜರ್, ಆ ಮಹಿಳೆಯನ್ನು ಅಲ್ಲಿಂದ ಕಳುಹಿಸಿದ್ದಾರೆ. ಚಿತ್ರಮಂದಿರದ ಅಂಗಳದಲ್ಲಿ ತನ್ನ ಪರ ಯಾರೊಬ್ಬರೂ ಮಾತನಾಡದೇ ಇದ್ದಾಗ ಆ ಮಹಿಳೆ ಅಲ್ಲಿಂದ ನೋವಿನಿಂದಲೇ ಹೊರನಡೆದಿದ್ದಾರೆ.
'ಒತ್ತಾಯವಾಗಿ ಚೆನ್ನಾಗಿದೆ ಅಂತ ಹೇಳಿಸೋಕೆ ಇವನ್ಯಾರು?'
ಈ ಘಟನೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ದೆಹಲಿ ಕನ್ನಡಿಗ ಪ್ರಕಾಶ್ ಎಂಬ ಖಾತೆಯಿಂದ "ಸಿನೆಮಾ ಚೆನ್ನಾಗಿದ್ರೆ ಚೆನ್ನಾಗಿದೆ ಅಂತ ಹೇಳ್ತಾರೇ, ಇಲ್ಲಾ ಅಂದ್ರೆ ಇಲ್ಲಾ ಅಂತ ಹೇಳ್ತಾರೆ.. ಒತ್ತಾಯವಾಗಿ ಚೆನ್ನಾಗಿದೆ ಅಂತ ಹೇಳಿಸೋಕೆ ಇವನ್ಯಾರು? Raj B Shetty ನೋಡಿ ನಿಮ್ಮ ಅಭಿಮಾನಿ ರೌಡಿಯನ್ನ ಎಂದು Commissioner of Police, Bengaluru City, DR. G Parameshwara ಅವರಿಗೆ ಟ್ಯಾಗ್ ಮಾಡಿ ಈ ರೌಡಿಯ ಮೇಲೆ ಕ್ರಮ ತೆಗೆದುಕೊಳ್ಳಿ.. ಇಂತಹವರಿಂದ ಮಹಿಳೆಯರು ಚಿತ್ರಮಂದಿರದ ಕಡೆಗೆ ಬರೋದು ಕಡಿಮೆ ಆಗಬಹುದು ಎಂದು ಆಗ್ರಹಿಸಿದ್ದಾರೆ.
ರಾಜ್ ಬಿ ಶೆಟ್ಟಿ ಪ್ರತಿಕ್ರಿಯೆ
ಸದ್ಯ ಘಟನೆಯ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ನಟ ರಾಜ್ ಬಿ ಶೆಟ್ಟಿ "ಸಿನಿಮಾ ಎಂದರೆ ವಿಮರ್ಶೆ ಅಥವಾ ವಿಶ್ಲೇಷಣೆಯ ಮಾಧ್ಯಮ, ನಮಗೆ ಸಂಭಾವನೆ ನೀಡುವ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ಹೇಳುವ ಹಕ್ಕು ಹೊಂದಿದ್ದಾರೆ. ಅದನ್ನು ಒಪ್ಪಲು ಅಥವಾ ಒಪ್ಪದಿರಲು ನಾವು ಸ್ವತಂತ್ರರು. ಆದರೆ ನಾವು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಜನರಿಗೆ ಯಾವುದೇ ರೀತಿ ಕಿರುಕುಳ ನೀಡಲು ಪ್ರಯತ್ನಿಸಬಾರದು. ಅದೂ ಕೂಡ ವಿಡಿಯೋದಲ್ಲಿರುವವರು ನಮ್ಮ ಚಿತ್ರಕ್ಕೆ ಸಂಬಂಧವೇ ಇಲ್ಲದವರು. ಯುವತಿ ಎದುರಿಸಬೇಕಾದ ಕಿರುಕುಳಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ, ನಮ್ಮನ್ನು ಕ್ಷಮಿಸಿ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.