

ಲಖನೌ: ಆಘಾತಕಾರಿ ಘಟನೆಯೊಂದರಲ್ಲಿ ಬಾಕಿ ಮೊತ್ತವನ್ನು ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಜೀವಂತವಾಗಿ ಸುಟ್ಟು ಹಾಕಲು ಯತ್ನಿಸಿರುವ ಘಟನೆ ಉತ್ತರಪ್ರದೇಶದ ಮೈನ್ಪುರಿಯಲ್ಲಿ ನಡೆದಿದೆ.
ಹಣ ಹಿಂತಿರುಗಿಸುವ ವಿಚಾರವಾಗಿ ತನ್ನನ್ನು ಕೊಲೆ ಮಾಡಲು ಅಂಗಡಿಯವ ಮುಂದಾಗಿದ್ದು, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಗಾಯಾಳು ದೀಪಾ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಘಟನೆ ಬಳಿಕ ಆರೋಪಿ ತಲೆಮಾರಿಸಿಕೊಂಡಿದ್ದು, ಪೊಲೀಸರು ಆತನನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಕೊತ್ವಾಲಿ ನಗರದ ಕಾಕನ್ ಗ್ರಾಮದ ನಿವಾಸಿಯಾದ ದೀಪಾ ಅದೇ ಊರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿಗೆ 80 ಸಾವಿರ ರೂಪಾಯಿ ಸಾಲ ಕೊಟ್ಟಿದ್ದರು. ಶನಿವಾರ ಇದೇ ವಿಚಾರವಾಗಿ ಇಬ್ಬರ ನಡುವೆ ಗಲಾಟೆಯಾಗಿದ್ದು, ಸಂತ್ರಸ್ತೆ ದೀಪಾ ತನ ಹಣವನ್ನು ಹಿಂತಿರುಗಿಸುವಂತೆ ಅಂಗಡಿಯವನಿಗೆ ತಾಕೀತು ಮಾಡಿದ್ದಾರೆ.
ಇದರಿಂದ ಕುಪಿತಗೊಂಡ ಆರೋಪಿಯು ಏಕಾಏಕಿ ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ. ಸಂತ್ರಸ್ತೆ ಜೋರಾಗಿ ಕೂಗಿಕೊಂಡಿದ್ದು, ಕೂಡಲೇ ಸ್ಥಳೀಯರು ಬೆಂಕಿ ನಂದಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಘಟನೆ ಬಳಿಕ ಆರೋಪಿ ತಲೆಮಾರಿಸಿಕೊಂಡಿದ್ದು, ಆತನನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ. ಶೀಘ್ರದಲ್ಲೇ ಆತನನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.