ತಗಡೂರಿನಲ್ಲಿ ಮಹಿಳೆ ಹತ್ಯೆ

murder
Published on

ನಂಜನಗೂಡು/ತಗಡೂರು: ತಾಲೂಕಿನ ತಗಡೂರು ಗ್ರಾಮದಲ್ಲಿ ದನ ಕಟ್ಟುವ ಕೊಟ್ಟಿಗೆ ವಿಚಾರಕ್ಕೆ ದಾಯಾದಿಗಳ ನಡುವೆ ಉಂಟಾದ ಕಲಹ ಮಹಿಳೆ ಕೊಲೆಯಲ್ಲಿ ಅಂತ್ಯವಾಗಿದೆ. ಗ್ರಾಮದ ನಿಂಗಣ್ಣ ಪತ್ನಿ ವಿನೋದಾ(45) ಮೃತರು. ಸಹೋದರರಾದ ನಿಂಗಣ್ಣ ಹಾಗೂ ಸ್ವಾಮಿ ಕುಟುಂಬದವರ ನಡುವೆ ದನದ ಕೊಟ್ಟಿಗೆ ವಿಚಾರವಾಗಿ ಗುರುವಾರ ಸಂಜೆ ಗಲಾಟೆ ನಡೆದಿದೆ. ಶುಕ್ರವಾರ ಬೆಳಗ್ಗೆ ಈ ವಿಚಾರವಾಗಿ ಸ್ವಾಮಿ ಪುತ್ರ ಅಭಿಷೇಕ್ ಎಂಬಾತ ನಿಂಗಣ್ಣನ ಪತ್ನಿ ವಿನೋದಾ ಜತೆ ಕ್ಯಾತೆ ತೆಗೆದು ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದರಿಂದ ತೀವ್ರವಾಗಿ ನಿತ್ರಾಣಗೊಂಡಿದ್ದ ವಿನೋದಾ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಘಟನೆ ಬಳಿಕ ಆರೋಪಿ ಅಭಿಷೇಕ್ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಕವಲಂದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net