ಪ್ರೇಮಿಯೊಂದಿಗೆ ಹೋಟೆಲ್​​ನಲ್ಲಿ ನಿಶ್ಚಿಂತೆಯಿಂದ ತಂಗಲು ಅಣ್ಣನ ಮಗುವನ್ನು ಅಪಹರಿಸಿದಳು!

police
Published on

ಫತೇಹಪುರ: ಉತ್ತರಪ್ರದೇಶದ ಫತೇಹಪುರದಿಂದ ಅಪಹರಣಗೊಂಡಿದ್ದ 3 ವರ್ಷದ ಹೆಣ್ಣುಮಗುವನ್ನು ಪೊಲೀಸರು ಪಂಬಾಬ್​ನ ಜಲಂಧರ್​ನಲ್ಲಿ ಪತ್ತೆ ಹಚ್ಚಿದ್ದಾರೆ. ಪ್ರೇಮಿಯೊಂದಿಗೆ ಹೋಟೆಲ್​ನಲ್ಲಿರುವಾಗ ಸಾಧಾರಣವಾದ ದಂಪತಿಯಂತೆ ಕಾಣಿಸುವ ಉದ್ದೇಶದಿಂದ ಮಗುವಿನ ಸೋದರತ್ತೆಯೇ ಮಗುವನ್ನು ಕದ್ದೊಯ್ದಿದ್ದಳು ಎನ್ನಲಾಗಿದೆ.

ಉತ್ತರ ಪ್ರದೇಶದ ಫತೇಹಪುರ ನಿವಾಸಿಯಾದ 20 ವರ್ಷದ ನಿಶು ದ್ವಿವೇದಿ, ಪಂಜಾಬ್​ನ ಜಲಂಧರ್​ನ ನವದೀಪ್ ಸಿಂಗ್ ಅಲಿಯಾಸ್ ಗಿನ್ನಿ(25) ಎಂಬುವ ಯುವಕನನ್ನು ಪ್ರೀತಿಸುತ್ತಿದ್ದಳಂತೆ. ಮನೆಯಿಂದ ಓಡಿ ಹೋಗಿ ಅವನನ್ನು ಮದುವೆ ಆಗಬೇಕೆಂದು ಪ್ಲಾನ್ ಮಾಡಿದ ಆಕೆ, ಮಾರ್ಚ್​ 2 ರಂದು ತನ್ನೊಂದಿಗೆ ಸೋದರನ 3 ವರ್ಷದ ಮಗುವನ್ನೂ ಯಾರಿಗೂ ತಿಳಿಸದೆ ಕರೆದೊಯ್ದಿದ್ದಾಳೆ.

ಮಗುವಿನ ಅಪಹರಣದ ತನಿಖೆ ಆರಂಭಿಸಿದ ಫತೇಹಪುರ ಪೊಲೀಸರು, ಶುಕ್ರವಾರ (ಮಾರ್ಚ್ 5) ಜಲಂಧರ್​ ತಲುಪಿ, ಅತ್ತೆಯ ಬಳಿಯಿದ್ದ ಮಗುವನ್ನು ಸುರಕ್ಷಿತವಾಗಿ ವಾಪಸ್ ಮನೆಗೆ ಕರೆತಂದಿದ್ದಾರೆ. ಈ ಸಂಬಂಧವಾಗಿ ಯುವಜೋಡಿಯನ್ನು ಬಂಧಿಸಿರುವ ಪೊಲೀಸರು, ವಿಚಾರಣೆ ನಡೆಸುತ್ತಿದ್ದಾರೆ.

ವಿಚಾರಣೆಯ ಸಮಯದಲ್ಲಿ, ನಿಶು, ತನ್ನ ಪ್ರೇಮಿ ಗಿನ್ನಿಯನ್ನು ಮದುವೆಯಾಗುವ ಉದ್ದೇಶದಿಂದ ತೆರಳಿದ್ದೆ. ಹೋಟೆಲ್​ನಲ್ಲಿ ಇಬ್ಬರೂ ಗಂಡಹೆಂಡತಿಯಂತೆ, ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ತಂಗುವ ಉದ್ದೇಶದಿಂದ, ಮಗುವನ್ನು ಜೊತೆಗೆ ಕರೆದೊಯ್ದೆ ಎಂದು ಹೇಳಿದ್ದಾಳೆ. ಮಗುವಿಗೆ ಯಾವುದೇ ರೀತಿಯ ಹಾನಿ ಮಾಡುವ ಉದ್ದೇಶ ತನಗಿರಲಿಲ್ಲ ಎಂದಿದ್ದಾಳೆ ಎಂದು ಫತೇಹಪುರ ಎಸ್ಪಿ ಸತ್ಪಾಲ್ ಅಂಟಿಲ್ ತಿಳಿಸಿದ್ದಾರೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net