ಕೇಳಿದಷ್ಟು ವರದಕ್ಷಿಣೆ ತರಲಿಲ್ಲವೆಂದು ಸೊಸೆಗೆ HIV ಸೋಂಕಿತ ಸೂಜಿಯನ್ನು ಚುಚ್ಚಿದ ಅತ್ತೆ-ಮಾವ

Injection
ಸಾಂದರ್ಭಿಕ ಚಿತ್ರ
Published on

ಲಖನೌ: ವರದಕ್ಷಿಣೆ ಬೇಡಿಕೆಗಳನ್ನು ಈಡೇರಿಸಲಿಲ್ಲವೆಂಬ ಕಾರಣಕ್ಕೆ ಅತ್ತೆ-ಮಾವ ಸೇರಿಕೊಂಡು ಸೊಸೆಗೆ ಎಚ್​ಐವಿ (HIV) ಸೋಂಕಿತ ಸೂಜಿ ಚುಚ್ಚಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಸಹರಾನ್​ಪುರದಲ್ಲಿ ನಡೆದಿದೆ.

ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಮಹಿಳೆಯ ಪತಿ, ಅತ್ತೆ, ಮಾವ ಸೇರಿದಂತೆ ಒಟ್ಟು ನಾಲ್ಕು ಮಂದಿ ವಿರುದ್ಧ ಪೊಲೀಸರು ಬಿಎನ್​ಎಸ್​ಎಸ್  307, 498ಎ, 323, 328, 406 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆಯ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೊಬ್ಬರು, ಉತ್ತರಾಖಂಡದ ಹರಿದ್ವಾರದ ನಿವಾಸಿಯಾದ ಅಭಿಷೇಕ್ ಸೈನಿ ಎಂಬಾತನಿಗೆ ಸೋನಲ್​ಳನ್ನು ಕೊಟ್ಟು 2023ರ ಫೆಬ್ರವರಿ 15ರಂದು ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ವಿವಾಹದ ಸಮಯದಲ್ಲಿ 15 ಲಕ್ಷ ರೂಪಾಯಿ ಹಣ ಹಾಗೂ ಸಬ್​-ಕಾಂಪ್ಯಾಕ್ಟ್​ ಎಸ್​ಯುವಿಯನ್ನು ವರದಕ್ಷಿಣೆಯಾಗಿ ನೀಡಲಾಗಿತ್ತು. ಆದರೆ, ಮದುವೆಯಾದ ಕೆಲ ತಿಂಗಳ ಬಳಿಕ ವರದಕ್ಷಿಣೆ ವಿಚಾರವಾಗಿ ಗಂಡನ ಮನೆಯವರು ಖ್ಯಾತೆ ತೆಗೆದಿದ್ದು, ಹೆಚ್ಚುವರಿ 10 ಲಕ್ಷ ರೂಪಾಯಿ ಹಣ ಹಾಘೂ ಸ್ಕಾರ್ಪಿಯೋ ಕಾರನ್ನು ಕೊಡುವಂತೆ ಬೇಡಿಕೆ ಇರಿಸಿದ್ದಾರೆ. 

Dowry Harassment

ಗಂಡನ ಮನೆಯವರ ಬೇಡಿಕೆಯನ್ನು ಹುಡುಗಿ ಕಡೆಯವರು ನಿರಾಕರಿಸಿದಾಗ ಅತ್ತೆ-ಮಾವ ಕಿರುಕುಳ ನೀಡಲು ಆರಂಭಿಸಿದ್ದರು, ಮಗಳನ್ನು ಅವಮಾನಿಸಿದರು, ಮಗನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿ ಮಾರ್ಚ್​ 25, 2023ರಂದು ಮನೆಯಿಂದ ಹೊರಹಾಕಿದರು. ಬಳಿಕ ಉಬೈ ಕುಟುಂಬಸ್ಥರು ಮಾತನಾಡಿ ಆಕೆಯನ್ನು ಮತ್ತೆ ಗಂಡನ ಮನೆಗೆ ಕಳುಹಿಸಲಾಗಿತ್ತು. ಸ್ವಲ್ಪದಿನ ಸುಮ್ಮನಿದ್ದ ಗಂಡನ ಮೆನಯವರು ಮತ್ತೆ ವರದಕ್ಷಿಣೆಗಾಗಿ ಪೀಡಿಸಲು ಶುರು ಮಾಡಿದ್ದು, ತವರು ಮನೆಯಲ್ಲಿ ಕೇಳಲು ನಿರಾಕರಿಸಿದಾಗ ಆಕೆಗೆ ಎಚ್​ಐವಿ (HIV) ಸೋಂಕಿತ ಸೂಜಿ ಚುಚ್ಚಿದ್ದಾರೆ.

ಮೊದಲಿಗೆ ದೂರು ದಾಖಲಿಸಲು ಹೋದಾಗ ಪೊಲೀಸರು ಹಿಂದೇಟು ಹಾಕಿದರು. ಆ ನಂತರ ಸಂತ್ರಸ್ತೆಯ ಪೋಷಕರು ಕೋರ್ಟ್​ ಮೆಟ್ಟಿಲೇರಿದ್ದು, ಕೋರ್ಟ್​ ನಿರ್ದೇಶನದ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಪ್ರಕರಣ ವಿಚಾರಣೆ ಹಂತದಲ್ಲಿದ್ದು ಮತ್ತಷ್ಟು ವಿಚಾರವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net