

ನವದೆಹಲಿ: ನಾರಿ ಮುನಿದರೆ ಮಾರಿ ಎಂಬ ಮಾತಿಗೆ ನೋಯ್ಡಾದ ಮಹಿಳೆಯೊಬ್ಬರು ಉತ್ತಮ ಉದಾಹರಣೆ ಆಗಿದ್ದಾರೆ. ಮಹಿಳೆಯ ಮೇಲೆ ದೌರ್ಜನ್ಯ ನಡೆದಾಗ ಕೆಲವರು ದೂರು ನೀಡುತ್ತಾರೆ. ಇನ್ನು ಕೆಲವರು ಮರ್ಯಾದೆಗೆ ಅಂಜಿ ಸುಮ್ಮನಾಗುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಈ ರೀತಿ ಮಾಡದೇ ತಮ್ಮದೇ ಶೈಲಿಯಲ್ಲಿ ಘಟನೆಯನ್ನು ನಿರ್ವಹಿಸಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಹೌದು. ಸಾರ್ವಜನಿಕ ಪ್ರದೇಶದಲ್ಲಿ ಮೈಕೈ ಮುಟ್ಟಿ ಅಶ್ಲೀಲವಾಗಿ ವರ್ತಿಸಿದ ಕಾಮುಕನನ್ನು ಸಂತ್ರಸ್ತ ಮಹಿಳೆ ಜನರ ಮುಂದೆಯೇ ಹಿಡಿದು ಅಟ್ಟಾಡಿಸಿಕೊಂಡು ಹೊಡೆದಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ನೋಯ್ಡಾ ಸೆಕ್ಟರ್-12ರ ಪೆಟ್ರೋಲ್ ಪಂಪ್ನಲ್ಲಿ ಕೆಲಸ ಮಾಡುವ 24 ವರ್ಷದ ಮಹಿಳೆ ಬಂಕ್ಗೆ ಹೋಗುವಾಗ ಮಾರ್ಗ ಮಧ್ಯೆ ಘಟನೆ ಜರುಗಿದೆ.
ಮಹಿಳೆ ನಡೆದು ಹೋಗುವಾಗ ಬೈಸಿಕಲ್ ಸವಾರನೊಬ್ಬ ಸ್ವಲ್ಪ ದೂರದಲ್ಲಿ ಸೈಕಲ್ ನಿಲ್ಲಿಸಿ ಆಕೆಯನ್ನು ದಿಟ್ಟಿಸಿ ನೋಡಲು ಆರಂಭಿಸುತ್ತಾನೆ. ಮಹಿಳೆ ಸಹರಾ ರೆಡ್ ಲೈಟ್ ಬಳಿ ಹೋಗುತ್ತಿದ್ದಂತೆ ಆಕೆಯ ಮೇಲೆ ಎರಗುವ ಆರೋಪಿ ಆಕೆಯನ್ನು ಎಳೆದಾಡಿ ಮೈಯೆಲ್ಲಾ ಮುಟ್ಟಿ ಬೈಸಿಕಲ್ ತೆಗೆದುಕೊಂಡು ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಾನೆ. ಏನು ನಡೆದಿದೆ ಎಂಬುದು ದಾರಿಹೋಕರಿಗೂ ತಿಳಿಯುವುದಿಲ್ಲ. ಆದರೆ, ಸುಮ್ಮನಾಗದ ಮಹಿಳೆ ಆತನ ಬೆನ್ನತ್ತಿ ಹಿಡಿಯುತ್ತಾಳೆ.
ಇದಾದ ಬಳಿಕ ಆತನನ್ನು ಚೆನ್ನಾಗಿ ಥಳಿಸಿ ಕೆಳಕ್ಕುರುಳಿಸುತ್ತಾಳೆ. ಈ ವೇಳೆ ಆತನು ಸಹ ಮಹಿಳೆಯ ಮೇಲೆ ಹಲ್ಲೆಗೆ ಮುಂದಾಗುತ್ತಾನೆ. ಇದನ್ನು ದಾರಿಹೋಕರು ನೋಡಿದರು ಯಾರೊಬ್ಬರು ಬಿಡಸಲು ಮುಂದಾಗದೇ ತಮ್ಮ ಮೊಬೈಲ್ ಫೋನ್ಗಳಲ್ಲಿ ಇಬ್ಬರ ಕಿತ್ತಾಟವನ್ನು ವಿಡಿಯೋ ಮಾಡಿಕೊಳ್ಳುತ್ತಾರೆ.
ಈ ಬಗ್ಗೆ ಮಾತನಾಡಿರುವ ಮಹಿಳೆ ಕಳೆದ ಆರು ವರ್ಷಗಳಿಂದ ನಾನಿಲ್ಲ ವಾಸವಿದ್ದೇನೆ. ಒಮ್ಮೆಯು ಈ ರೀತಿ ಆಗಿಲ್ಲ. ಇದೇ ಮೊದಲ ಬಾರಿ ನಾನು ಅಸುರಕ್ಷಿತಳು ಎಂದು ಅನಿಸಿತು ಎಂದಿದ್ದಾರೆ.
ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುವುದಾಗಿ ಪೊಲೀಸರು ಮಹಿಳೆಗೆ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)