ಹರ್ಷೀಸ್​ ಚಾಕೊಲೇಟ್​​ ಸಿರಪ್​ನಲ್ಲಿ ಪತ್ತೆಯಾಯ್ತು ಸತ್ತ ಇಲಿ; ಕಂಪನಿ ನೀಡಿದ ಸ್ಪಷ್ಟನೆ ಹೀಗಿದೆ

Hersheys Rat
Published on

ಚೆನ್ನೈ: ಇತ್ತೀಚಿನ ವರ್ಷಗಳಲ್ಲಿ ಆನ್​ಲೈನ್​ ಶಾಪಿಂಗ್​ ಸಖತ್​ ಟ್ರೆಂಡ್​ ಆಗುತ್ತಿದ್ದು, ಕುಳಿತಲ್ಲಿಯೇ ಏನು ಬೇಕಾದರೂ ಆರ್ಡರ್​ ಮಾಡಿ ತರಿಸಿಕೊಳ್ಳಬಹುದಾಗಿದೆ. ಇತ್ತೀಚಿನ ವರ್ಷಗಳಲ್ಲಿ ಮನೆಗೆ ಬೇಕಾಗಿರುವ ದಿನಸಿ ಸಾಮಾಗ್ರಿಗಳು ಕೂಡ ಆನ್​ಲೈನ್​ನಲ್ಲಿ ದೊರೆಯುತ್ತಿದ್ದು, ಆರ್ಡರ್​ ಮಾಡಿದ ಕೆಲವೇ ಕ್ಷಣಗಳಲ್ಲಿ ಮನೆಗೆ ಬಂದು ತಲುಪಿರುತ್ತದೆ. ಇದೀಗ ಆನ್​ಲೈನ್​ ಶಾಪಿಂಗ್​ ದೈತ್ಯ Zeptoನಲ್ಲಿ ಆರ್ಡರ್​ ಮಾಡಿದ ಹರ್ಷೀಸ್ ಚಾಕೊಲೇಟ್​​​ ಸಿರಪ್‌ ಬಾಟಲಿಯಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗಿದೆ.

ಕೆಲ ದಿನಗಳ ಹಿಂದೆ ಮುಂಬೈನ ವೈದ್ಯರೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಂನಲ್ಲಿ ತುಂಡರಿಸಿದ ಮಾನವನ ಬೆರಳು, ಬಳಿಕ ಐಸ್​ಕ್ರೀಂನಲ್ಲಿ ಜರಿ ಪತ್ತೆಯಾಗಿದ್ದು, ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಇದೀಗ ಹರ್ಷೀಸ್​ ಚಾಕೊಲೇಟ್​​ ಸಿರಪ್‌ನ ವಿಡಿಯೋ ಎಲ್ಲೆಡೆ ಸಂಚಲನವನ್ನು ಮೂಡಿಸಿದ್ದು, ಈ ಬಗ್ಗೆ ಕಂಪನಿ ಸ್ಪಷ್ಟನೆ ನೀಡಿದೆ.

ಆರ್ಡರ್ ಮಾಡಿದ ಹರ್ಷೀಸ್​​​​​ ಕಂಪನಿಯ ಚಾಕೋಲೇಟ್ ಸಿರಪ್‌ನಲ್ಲಿ ಸತ್ತ ಇಲಿ ಕಂಡುಬಂದಿದ್ದು, ಪ್ರಮಿ ಶ್ರೀಧರ್ ಎಂಬ ಇನ್‌ಸ್ಟಾಗ್ರಾಮ್ ಬಳಕೆದಾರರು ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದಲ್ಲದೆ ಬಾಟಲಿಯಲ್ಲಿ ಸತ್ತ ಇಲಿ ಇರುವುದು ತಿಳಿಯುವ ಮೊದಲು ಕುಟುಂಬದ ಮೂವರು ಸದಸ್ಯರು ಈ ಸಿರಪ್ ಅನ್ನು ಕುಡಿದಿರುವುದು ತಿಳಿದುಬಂದಿದೆ. ತಕ್ಷಣ ಮೂವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ ಎಂದು ವರದಿಯಾಗಿದೆ.

ಈ ಕುರಿತು ಮಾತನಾಡಿದ ಪ್ರಮಿ ಶ್ರೀಧರ್, ನಾವು ಬ್ರೌನಿ ಕೇಕ್‌ಗಳೊಂದಿಗೆ ತಿನ್ನಲು Zeptoದ ಮೂಲಕ ಆನ್​ಲೈನ್​ನಲ್ಲಿ ಹರ್ಷೀಸ್​ ಚಾಕೋಲೇಟ್​ ಸಿರಪ್​ಅನ್ನು ತರಿಸಿಕೊಂಡೆವು. ಕ್ಯಾಪ್​ ತೆಗೆದು ಅದನ್ನು ಕೇಕ್​ ಮೇಲೆ ಹಾಕಲು ಶುರು ಮಾಡಿದಾಗ ಮೊದಲಿಗೆ ನಾವು ಸಣ್ಣ ಸಣ್ಣ ಕೂದಲು ಇರುವುದನ್ನು ನೋಡಿದೆವು. ಬಳಿಕ ಕ್ಯಾಪ್​ ತೆಗೆದು ಪರಿಶೀಲಿಸಿದಾಗ ಇಲ್ಲಿ ಸತ್ತಿರುವುದು ಪತ್ತೆಯಾಗಿತ್ತು. ಯಾವುದೇ ಉತ್ಪನ್ನವಾಗಲಿ ಇನ್ನು ಮುಂದೆ ಸೇವಿಸುವುದಕ್ಕಿಂತ ಮುಂಚೆ ಒಮ್ಮೆ ಪರಿಶೀಲಿಸಿ ಆ ನಂತರ ಸೇವಿಸಿ ಎಂದು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂಪನಿಯು ನಾವು ಈ ವಿಚಾರವಾಗಿ ಕ್ಷಮೆಯಾಚಿಸುತ್ತೇವೆ. ದಯವಿಟ್ಟು ನಿಮ್ಮ ಮಾಹಿತಿಯನ್ನು ನಮ್ಮ ಸಂಸ್ಥೆಯ ಹೆಲ್ಪ್​​ಲೈನ್​ ನಂಬರ್​ಗೆ ಕಳುಹಿಸಿಕೊಡಿ ಆದಷ್ಟು ಬೇಗ ನಾವು ಸಮಸ್ಯೆಯನ್ನು ಇತ್ಯರ್ಥಪಡಿಸುತ್ತೇವೆ ಎಂದು ಕಂಪನಿ ಪ್ರತಿಕ್ರಿಯಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net