

ಹೈದರಾಬಾದ್: ಚಿಕನ್ ಬಿರಿಯಾನಿ ( Biryani ) ತಿಂದು ಯುವತಿ ಸಾವನ್ನಪ್ಪಿದ್ದು, 15 ಮಂದಿ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಎರಡು ದಿನಗಳ ಹಿಂದೆ ಸೇಂಟ್ ಥಾಮಸ್ ಶಾಲೆಯ ಐವರು ಸಿಬ್ಬಂದಿ ಸೇರಿ ನಿರ್ಮಲ್ ನ ಗ್ರಿಲ್ ನೈನ್ ಹೋಟೆಲ್ ನಲ್ಲಿ ಊಟ ಮಾಡಿ.. ಚಿಕನ್ ಬಿರಿಯಾನಿ ತಿಂದಿದ್ದರು. ಅವರಲ್ಲಿ ಫೂಲ್ ಕಲಿಬಾಯಿ ಎಂಬ 19 ವರ್ಷದ ಯುವತಿ ತೀವ್ರ ಅಸ್ವಸ್ಥಳಾಗಿದ್ದಳು. ಕೂಡಲೇ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಘಟನೆ ಕುರಿತು ಯುವತಿಯ ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಕಾಮರೆಡ್ಡಿ ಆಸ್ಪತ್ರೆಗೆ ರವಾನಿಸಲಾಗಿದೆ. ಇದೇ ವೇಳೆ ಶಾಲೆಯ ಮಾಲೀಕರು ಗ್ರಿಲ್ ನೈನ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನವೆಂಬರ್ 4 ಸೋಮವಾರ ರಾತ್ರಿ ಇದೇ ಹೋಟೆಲ್‌ನಲ್ಲಿ ಊಟ ಮಾಡಿದ ಸುಮಾರು 20 ಮಂದಿ ಅಸ್ವಸ್ಥಗೊಂಡಿದ್ದಾರೆ ಎಂದು ವರದಿಯಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ. ಮೃತ ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಎರಡೂ ಪೊಲೀಸರು ಗ್ರಿಲ್ ನೈನ್ ರೆಸ್ಟೋರೆಂಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.