

ಹೈದರಾಬಾದ್: ಮೊಮೊಸ್ ( Momos )ತಿಂದ ಮಹಿಳೆ ಸಾವನ್ನಪ್ಪಿದ್ದು, 50 ಮಂದಿ ಅಸ್ವಸ್ಥಗೊಂಡಿರುವ ಘಟನೆ ಬಂಜಾರ ಹಿಲ್ಸ್ ಪಿಎಸ್ ನಲ್ಲಿ ನಡೆದಿದೆ.
ರೇಷ್ಮಾ ( 29 ) ಮೃತ ಯುವತಿ. ಈಕೆ ಸಿಂಗದಕುಂಟಾ ಬಸ್ತಿಯ ನಿವಾಸಿಯಾಗಿದ್ದಾಳೆ. ಮಹಿಳೆ ಮೊಮೊಸ್ ತಿಂದು ಅಸ್ವಸ್ಥಗೊಂಡಿದ್ದು, ಮನೆಯವರು ನಿಮ್ಸ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಬೀದಿಬದಿ ಆಹಾರ ತಿಂದು ರೇಷ್ಮಾ ಸಾವನ್ನಪ್ಪಿದ್ದು, ಕುಟುಂಬಸ್ಥರು ಅಳಲು ತೋಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಅನೇಕ ಸಂತ್ರಸ್ತರು ಪೊಲೀಸರ ಬಳಿ ದೂರು ನೀಡಿದ್ದಾರೆ. ಈ ಕುರಿತು ಬಂಜಾರ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಆಗ್ರಹಿಸಿದ್ದಾರೆ. ಮೊಮೊಸ್ ತಿಂದವರಲ್ಲಿ ಸುಮಾರು 10 ಮಂದಿ ಅಪ್ರಾಪ್ತರು ಕೂಡಾ ಇದ್ದಾರೆ ಎನ್ನಲಾಗಿದೆ.
ಪ್ರತಿ ವಾರದಂತೆ ಈ ವಾರವೂ ನಂದಿನಗರದಲ್ಲಿ ಸಂತೆ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಅಲ್ಲಿ ತಯಾರಾದ ಮೊಮೊಸ್ ಗಳನ್ನು ಹಲವರು ಖರೀದಿಸಿ ತಿಂದರು. ಮೊಮೊಸ್ ತಿಂದು ಮನೆಗೆ ಹೋಗುತ್ತಿದ್ದವರಿಗೆಲ್ಲರಿಗೂ ಇದ್ದಕ್ಕಿದ್ದಂತೆ ವಾಂತಿ ಬೇಧಿಯಾಗಿ ತೀವ್ರ ಅಸ್ವಸ್ಥರಾದರು. ಕುಟುಂಬ ಸದಸ್ಯರು ಅಸ್ವಸ್ಥರನ್ನು ಸ್ಥಳೀಯ ಆಸ್ಪತ್ರೆಗಳಿಗೆ ರವಾನಿಸಿದ್ದಾರೆ. ಸುಮಾರು 50 ಮಂದಿ ಅಸ್ವಸ್ಥರಾಗಿದ್ದಾರೆ ಎಂದು ವರದಿಯಾಗಿದೆ.
ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮೊಮೊಸ್ ಮಾರಾಟ ಮಾಡಿದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮೋಮಸ್ ಹೇಗೆ ತಯಾರಿಸಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.