

ಸವಣೂರ: ತಾಲೂಕಿನ ಜೇಕಿನಕಟ್ಟಿ ಗ್ರಾಮದಲ್ಲಿ ಮಹಿಳೆಯರ ದೇಣಿಗೆಯ ಹಣದಲ್ಲಿ ನೂತನವಾಗಿ ಗ್ರಾಮದ ಉಡಚಮ್ಮದೇವಿಯ ರಥ ನಿಮಾರ್ಣವಾಗಿದ್ದು, ಅ. 2 ವಿಜಯದಶಮಿ ಹಬ್ಬದಂದು ರಥೋತ್ಸವ ಲೋಕಾರ್ಪಣೆಗೊಳ್ಳಲಿದೆ.
ಗ್ರಾಮದ ನೂರಾರು ಮಹಿಳೆಯರು ಸ್ವಯಂಪ್ರೇರಣೆಯಿಂದ ದೇಣಿಗೆ ನೀಡುವ ಮೂಲಕ ರಥ ನಿಮಾರ್ಣಕ್ಕೆ ಕೈಜೋಡಿಸಿದ್ದಾರೆ. 10 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣವಾಗಿದ್ದು, ಗ್ರಾಮದ ಪ್ರತಿಯೊಂದು ಮನೆಯಿಂದ ಹೆಣ್ಣುಮಕ್ಕಳು ಧನಸಹಾಯ ಮಾಡಿದ್ದಾರೆ. ಹೀಗಾಗಿ ಟ್ರಸ್ಟ್ ಕಮೀಟಿಯಿಂದಲೂ ಮಹಿಳೆಯರ ಹೆಸರಿನಲ್ಲಿಯೇ ರಶೀದಿ ನೀಡಲಾಗುತ್ತಿದೆ. ಗ್ರಾಮದಿಂದ ಪರಸ್ಥಳಕ್ಕೆ ಮದುವೆ ಮಾಡಿಕೊಟ್ಟ ಹೆಣ್ಣುಮಕ್ಕಳು ಸಹ ದೇಣಿಗೆ ನೀಡಿದ್ದಾರೆ.
ಮಹಿಳೆಯರಿಂದಲೇ ರಥೋತ್ಸವ..
ಈಗಾಗಲೇ ಪ್ರತಿವರ್ಷ ದವನದಹುಣ್ಣಿಮೆಯ ಅಂಗವಾಗಿ ಗ್ರಾಮದ ಹುತ್ತಮಲ್ಲೇಶ್ವರ ಜಾತ್ರೆಯಲ್ಲಿ ಮೊದಲ ದಿನ ಪುರುಷರು ಹುತ್ತಮಲ್ಲೇಶ್ವರ ರಥವನ್ನು ಎಳೆಯುತ್ತಾರೆ. ಆದರೆ, ಎರಡನೇಯ ದಿನ ನಡೆಯುವ ಅಕ್ಕಮಹಾದೇವಿಯ ರಥವನ್ನು ಮಹಿಳೆಯರೇ ಎಳೆಯುವುದು ವಾಡಿಕೆಯಿದೆ. ಹೀಗಾಗಿ ಮಹಿಳೆಯರಿಂದ ದೇಣಿಗೆ ಪಡೆದು ಹೊಸದಾಗಿ ನಿಮಾರ್ಣಗೊಂಡ ಈ ಉಡಚಮ್ಮದೇವಿಯ ರಥವನ್ನು ಮಹಿಳೆಯರು ಎಳೆಯುವುದು ವಿಶೇಷವಾಗಿದೆ.
ಲೋಕಾರ್ಪಣೆ ನಾಳೆ...
ನೂತನ ರಥೋತ್ಸವ ಅ. 2ರಂದು ಲೋಕಾರ್ಪಣೆಗೊಳ್ಳಲಿದೆ. ಮಂತ್ರವಾಡಿ ಸಿದ್ದರಾಮೇಶ್ವರ ಶಿವಾಚಾರ್ಯರು, ಶಿಗ್ಗಾಂವಿ ತಾಲೂಕು ಹೋತನಹಳ್ಳಿ ಸಿಂದಗಿ ಶಾಖಾಮಠದ ಶಂಭುಲಿಂಗ ಶಿವಾಚಾರ್ಯರು ಸಾನ್ನಿಧ್ಯ ವಹಿಸಲಿದ್ದಾರೆ. ಈಗಾಗಲೇ ನವರಾತ್ರಿ ಅಂಗವಾಗಿ ಹಾನಗಲ್ಲ ತಾಲೂಕಿನ ಎಲಿವಾಳ ಗ್ರಾಮದ ಗುರುಪಾದಯ್ಯ ಶಾಸ್ತ್ರಿ ಎಸ್. ಹಿರೇಮಠ ಅವರಿಂದ ದೇವಿಯ ಪುರಾಣ ಪ್ರವಚನ ನಡೆದಿದ್ದು, ಅ. 2ರಂದು ಮಹಾಮಂಗಲವಾಗಲಿದೆ ಎಂದು ಟ್ರಸ್ಟ್ ಕಮೀಟಿ ಪ್ರಕಟಣೆ ತಿಳಿಸಿದೆ.