

ಹೈದರಾಬಾದ್: ಪುಷ್ಪ-2(pushpa-2) ಚಿತ್ರದ ಪ್ರೀಮಿಯರ್ ಷೋ ವೇಳೆ ಇಲ್ಲಿನ ಸಂಧ್ಯಾ ಚಿತ್ರಮಂದಿರಲ್ಲಿ ಕಾಲ್ತುಳಿತಕ್ಕೆ ಮಹಿಳೆಯೊಬ್ಬಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಟ ಅಲ್ಲು ಅರ್ಜುನ್ ಮತ್ತು ಥಿಯೇಟರ್ ಮಾಲೀಕನ ವಿರುದ್ಧ(FIR) ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಇದೇ ಡಿ.0ರಂದು ನಡೆದ ಈ ಘಟನೆಯಲ್ಲಿ ರೇವತಿ(35) ಮೃತಪಟ್ಟಿದ್ದು. ಅಕೆಯ 13 ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದಾನೆ. ದೂರಿನಲ್ಲಿ ಚಿತ್ರಮಂದಿರ ಮಾಲೀಕ ಮೊದಲ ಆರೋಪಿಯನ್ನಾಗಿ ಮಾಡಲಾಗಿದ್ದು, ಅಲ್ಲು ಅರ್ಜುನ್ ಅವರನ್ನು ಎರಡನೇ ಆರೋಪಿ ಎಂದು ದಾಖಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.
ಪ್ರೀಮಿಯರ್ ಶೋಗೆ ಬಂದಿದ್ದ ಅಲ್ಲು ಅರ್ಜುನ್ ಅವರನ್ನು ನೋಡಲು ಅಭಿಮಾನಿಗಳ ದಂಡೇ ನೆರೆದಿತ್ತು. ರಾತ್ರಿ 11 ಗಂಟೆಗೆ ಪುಷ್ಪ 2 ರ ಪ್ರೀಮಿಯರ್ ಶೋ ಆಯೋಜಿಸಲಾಗಿತ್ತು. ಪ್ರೀಮಿಯರ್ ವೀಕ್ಷಿಸಲು ಅಲ್ಲು ಅರ್ಜುನ್ ಬರಲಿದ್ದಾರೆ ಎಂಬ ವಿಷಯ ತಿಳಿದ ಜನರು ತಂಡೋಪತಂಡವಾಗಿ ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಸಾವಿಗೀಡಾಗಿದ್ದಾರೆ.
ಮತ್ತೊಂದೆಡೆ ಪುಷ್ಪ 2 ಸಿನಿಮಾ ಪ್ರದರ್ಶನದ ವೇಳೆ ಪರದೆಯ ಬಳಿ ಟಾರ್ಚ್‌ಗಳನ್ನು ಬೆಳಗಿಸಿದ ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬೆಂಗಳೂರಿನ ಊರ್ವಶಿ ಥಿಯೇಟರ್‌ನಲ್ಲಿ ನಿನ್ನೆ ರಾತ್ರಿ ಪ್ರದರ್ಶನದ ವೇಳೆ ಈ ಘಟನೆ ನಡೆದಿದೆ. ಅಲ್ಲದೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಭಿಮಾನಿಯೊಬ್ಬ ಸಿನಿಮಾ ನೋಡಲು ಹೊಗುತ್ತಿದ್ದಾಗ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಪುಷ್ಪ 2: ದಿ ರೂಲ್, 2021ರ ಬ್ಲಾಕ್‌ಬಸ್ಟರ್ ಪುಷ್ಪ: ದಿ ರೈಸ್‌ನ ಬಹು ನಿರೀಕ್ಷಿತ ಸಿನಿಮಾದ ಮುಂದಿನ ಭಾಗವಾಗಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಸುಕುಮಾರ್ ನಿರ್ದೇಶನ ಮಾಡಿದ್ದಾರೆ. ಇಂದಿನಿಂದ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. (ಏಜೆನ್ಸಿಸ್)