ಆಸ್ಪತ್ರೆಗಳಿಗೆ ಅಲೆಯುತ್ತಿದ್ದ ತುಂಬುಗರ್ಭಿಣಿಗೆ ಕಾರಿನಲ್ಲೇ ಹೆರಿಗೆ!

BABY
Published on

ಶಿವಮೊಗ್ಗ: ಎರಡು ಆಸ್ಪತ್ರೆಗಳಿಗೆ ತುಂಬುಗರ್ಭಿಣಿ ಹೋದರೂ ಕರೊನಾ ಪರಿಣಾಮ ದಾಖಲು ಮಾಡಿಕೊಂಡಿಲ್ಲ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಮತ್ತೊಂದು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಕಾರಿನಲ್ಲೇ ಹೆರಿಗೆಯಾಗಿದೆ.

ತೀರ್ಥಹಳ್ಳಿ ತಾಲೂಕಿನ ದ್ಯಾಮನಕೆರೆ ಗಾಪಂ ವ್ಯಾಪ್ತಿಯ ಕಂಕಳ್ಳಿ ಗ್ರಾಮದ ಗರ್ಭಿಣಿಯನ್ನು ತಪಾಸಣೆಗೆ ಪಾಲಕರು ತೀರ್ಥಹಳ್ಳಿ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದರು. ಆಸ್ಪತ್ರೆ ಸಿಬ್ಬಂದಿಯೊಬ್ಬರಿಗೆ ಕರೊನಾ ದೃಢಪಟ್ಟಿದ್ದರಿಂದ ಹೆರಿಗೆ ವಿಭಾಗ ಸೀಲ್​ಡೌನ್​ ಆಗಿತ್ತು. ಸ್ತ್ರೀರೋಗ ತಜ್ಞರು ಕೂಡ ಕ್ವಾರಂಟೈನ್​ ಆಗಿದ್ದರು. ಹಾಗಾಗಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಿಬ್ಬಂದಿ ಸೂಚಿಸಿದ್ದರು.

ಖಾಸಗಿ ಆಸ್ಪತ್ರೆಗೆ ಹೋದಾಗ ಕರೊನಾ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ವಾಪಸ್​ ಕಳುಹಿಸಿದರು ಎನ್ನಲಾಗಿದೆ. ಈ ನಡುವೆ ಹೆರಿಗೆ ನೋವು ಹೆಚ್ಚಾಗಿದ್ದು ತೀರ್ಥಹಳ್ಳಿಯಿಂದ ಶಿವಮೊಗ್ಗ ಆಸ್ಪತ್ರೆಗೆ ಸೋಮವಾರ ಕರೆತರಲಾಗುತ್ತಿತ್ತು. ಹೆರಿಗೆ ನೋವು ಹೆಚ್ಚಾಗಿ ಕಾರಿನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಳಿಕ ತೀರ್ಥಹಳ್ಳಿ ಸರ್ಕಾರಿ ಆಸ್ಪತ್ರೆ ವೈದ್ಯರು ಬಾಣಂತಿ ಮತ್ತು ಮಗುವನ್ನು ದಾಖಲಿಸಿಕೊಂಡು ಚಿಕಿತ್ಸೆ ನೀಡಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net