ಸಿಎಂ ಯೋಗಿ ಕಚೇರಿ ಎದುರೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆತ್ನಿಸಿದ ಅಮೇಠಿಯ ತಾಯಿ-ಮಗಳು!

UP cm office
Published on

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಕಚೇರಿ ಎದುರೇ ಒಬ್ಬ ತಾಯಿ ಮತ್ತು ಮಗಳು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ಘಟನೆ ಶುಕ್ರವಾರ ನಡೆದಿದೆ.

ಈ ರೀತಿ ನಡೆದುಕೊಂಡ ತಾಯಿ ಮತ್ತು ಮಗಳನ್ನು ಗುಡಿಯಾ ಮತ್ತು ಸೋಫಿಯಾ ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ 5.40ರ ಸುಮಾರಿಗೆ ಈ ತಾಯಿ-ಮಗಳು ಆತ್ಮಹತ್ಯೆಗೆ ಪ್ರಯತ್ನಿಸಿದ್ದರು. ಗಂಭೀರವಾಗಿ ಸುಟ್ಟಗಾಯಗಳೊಂದಿಗೆ ಸ್ಥಳೀಯ ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಮೇಠಿಯಲ್ಲಿರುವ ತಮ್ಮ ಜಮೀನಿನ ವಿವಾದದ ವಿಚಾರವಾಗಿ ಪೊಲೀಸರು ನಿಷ್ಕ್ರಿಯತೆ ತೋರುತ್ತಿದ್ದಾರೆ ಎಂಬುದು ಈ ಮಹಿಳೆಯರ ಆರೋಪ. ಉತ್ತರಪ್ರದೇಶದ ಹೈಸೆಕ್ಯುರಿಟಿ ಝೋನ್​ನಲ್ಲಿರುವ ಲೋಕಭವನದ ಎದುರೇ ಅವರು ಆತ್ಮಹತ್ಯೆಗೆ ಪ್ರಯತ್ನಿಸಿದ ಕಾರಣ ಪ್ರಕರಣ ಎಲ್ಲರ ಗಮನಸೆಳೆದಿದೆ. ಕೂಡಲೇ ಪೊಲೀಸರು ಅವರನ್ನು ಬೆಂಕಿಯಿಂದ ರಕ್ಷಿಸಿದ್ದು, ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಈ ಘಟನೆಯ ವಿಡಿಯೋ ವೈರಲ್​ ಆಗಿದೆ.

ಅಮೇಠಿಯ ಜಮೋ ಪ್ರದೇಶದ ನಿವಾಸಿಗಳು ಇವರು. ಅಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಲೋಕಭವನದ ಎದುರು ಬಂದರೂ ಇಲ್ಲಿ ಯಾರನ್ನೂ ಭೇಟಿಯಾಗಿಲ್ಲ. ದಿಢೀರನೆ ಮೈಮೇಲೆ ಏನೋ ಸುರಿದು ಬೆಂಕಿ ಹಚ್ಚಿಕೊಂಡರು. ಪ್ರಕರಣದ ತನಿಖೆಯನ್ನು ಪೊಲೀಸರು ಕೈಗೆತ್ತಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net