17 ವೈದ್ಯರಿಂದ ಕಂಡುಹಿಡಿಯಲಾಗದ ಖಾಯಿಲೆ ಯಾವುದೆಂದು ಪತ್ತೆ ಹಚ್ಚಿದ ChatGPT

ChatGPT
Published on

ನವದೆಹಲಿ: ಕೃತಕ ಬುದ್ಧಿಮತ್ತೆಯ ಕೊಡುಗೆಯಾದ ಚಾಟ್ ಜಿಪಿಟಿಯನ್ನು ಗೊತ್ತಿಲ್ಲದ ವಿಚಾರಗಳನ್ನು ತಿಳಿದುಕೊಳ್ಳಲು ಬಳಸುವುದು ಸಾಮಾನ್ಯ. ಆದರೆ ಮಹಿಳಯೆಯೊಬ್ಬರು ಯಾವ ವೈದ್ಯರಿಗೂ ಕಂಡುಹಿಡಿಯಲಾಗದ ತನ್ನ ಮಗನ ಖಾಯಿಲೆ ಯಾವುದೆಂದು ಚಾಟ್ ಜಿಪಿಟಿ ಮೂಲಕ ತಿಳಿದುಕೊಂಡಿದ್ದಾರೆ.

ಕರ್ಟನಿ ಎನ್ನುವ ಮಹಿಳೆ ತನ್ನ 4 ವರ್ಷದ ಮಗ ಅಲೆಕ್ಸ್ ಹಲ್ಲು ನೋವಿನಿಂದ ಬಳಲುತ್ತಿರುವುದನ್ನು ಗಮನಿಸಿ, ಸರಿಹೋಗಬಹುದೆಂದು ಸುಮ್ಮನಾಗಿದ್ದಾರೆ. ಆದರೆ ದಿನದಿಂದ ದಿನಕ್ಕೆ ನೋವು ಜಾಸ್ತಿಯಾಗಲಾರಂಭಿಸಿತು. ಕಂಡಿದ್ದನ್ನೆಲ್ಲಾ ಕಚ್ಚುವುದು, ಹಠ ಮಾಡುವುದು, ಕಾಲುಗಳನ್ನು ಎಳೆದುಕೊಂಡು ನಡೆಯುವುದು ಸೇರಿದಂತೆ ಹಲವು ಅನುಮಾನಾಸ್ಪದ ಲಕ್ಷಣಗಳು ಕರ್ಟನಿಯನ್ನು ಚಿಂತೆಗೀಡುಮಾಡಿತು. ಕೊನೆಗೆ ರಾತ್ರಿ ಮಲಗಿದಾಗ ಅಲೆಕ್ಸ್​ಗೆ ಉಸಿರಾಡುವುದೂ ಕಷ್ಟವಾಯಿತು. ಈ ಎಲ್ಲಾ ವಿಚಾರಗಳು ತಾಯಿಗೆ ನಿದ್ದೆ ಇಲ್ಲದೆ ಚಿಂತೆಗಿಡು ಮಾಡಿದ್ದವು.

 ಮಗನ ಬೆಳವಣಿಗೆಯೂ ನಿಂತು ಹೋದ ಮೇಲೆ ಪೀಡಿಯಾಟ್ರಿಶನ್ ಬಳಿ ತೊರಿಸಿ ಚಿಕಿತ್ಸೆ ಕೊಡಿಸಿದರು. ಆದರೂ ಹಲ್ಲು ನೋವು ಕಡಿಮೆಯಾಗದ ಹಿನ್ನೆಲೆ ದಂತ ವೈದ್ಯರ ಬಳಿಯೂ ತೆರಳಿದರು. ಆದರೆ 2021 ರಿಂದ ಸುಮಾರು 17 ವೈದ್ಯರನ್ನು ಭೇಟಿಯಾದರೂ ಯಾರಿಗೂ ಅಲೆಕ್ಸ್​ ಬಳಲುತ್ತಿರುವ ರೋಗ ಯಾವುದೆಂದು ಕಂಡು ಹಿಡಿದು ಸೂಕ್ತ ಚಿಕಿತ್ಸೆಯನ್ನು ನೀಡಲು ಸಾಧ್ಯವಾಗಲೇ ಇಲ್ಲ. ಇದರಿಂದ ಬೇಸತ್ತಿದ್ದ ಕರ್ಟನಿ ಇತ್ತೀಚೆಗೆ ಚಾಟ್ ಜಿಪಿಟಿಯ ಬಗ್ಗೆ ತಿಳಿದುಕೊಂಡಿದ್ದಾರೆ. ರಾತ್ರಿ ತಮ್ಮ ಕಂಪ್ಯೂಟರಿನಲ್ಲಿ ಚಾಟ್ ಜಿಪಿಟಿ ತೆರೆದು, ಅಲೆಕ್ಸ್​ನ ಎಂ.ಆರ್.ಐ ಸ್ಕ್ಯಾನ್​ನಲ್ಲಿ ದಾಖಲಾಗಿದ್ದ ಪ್ರತಿಯೊಂದನ್ನೂ ಅದರಲ್ಲಿ ಬರೆದಿದ್ದಾರೆ. ರೋಗ ಲಕ್ಷಣಗಳನ್ನೂ ಅದರಲ್ಲಿ ಫೀಡ್ ಮಾಡಿದ ಮೇಲೆ ಚಾಟ್ ಜಿಪಿಟಿಯು ಅಲೆಕ್ಸ್ ಯಾವ ಬಳಲುತ್ತಿರುವ ಖಾಯಿಲೆ ಟೆಥರ್ಡ್​ ಕಾರ್ಡ್​ ಸಿಂಡ್ರೋಮ್ (Tethered cord Syndrome)ಇರಬಹುದೆಂದು ಸೂಚಿಸಿದೆ.

ಟೆಥರ್ಡ್​ ಕಾರ್ಡ್​ ಸಿಂಡ್ರೋಮ್ ನರ ಹಾಗೂ ಮೆದುಳಿಗೆ ಸಂಬಂಧಿಸಿದ ಖಾಯಿಲೆಯಾಗಿದ್ದು, ಬೆನ್ನು ಹುರಿಗೆ ಹಾನಿ ಮಾಡುವುದರ ಜತೆಗೆ ನಡೆದಾಡುವಾಗ ಸಮಸ್ಯೆಯೂ ಉಂಟಾಗುತ್ತದೆ. ಬಳಿಕ ಫೇಸ್​ಬುಕ್​ನಲ್ಲಿ ಇದರ ಕುರಿತು ಹುಡುಕಾಡಿದಾಗ ಹಲವು ಮಕ್ಕಳು ಈ ಖಾಯಿಲೆಯಿಂದ ಬಳಲುತ್ತಿರುವುದು ಆಕೆಗೆ ತಿಳಿದಿದೆ.

ಚಾಟ್ ಜಿಪಿಟಿಯ ಈ ಫಲಿತಾಂಶವನ್ನು ಆಧರಿಸಿ ನರವೈದ್ಯರ ಬಳಿ ಹೋದಾಗ ಅಲೆಕ್ಸ್​ಗೆ ಆ ಖಾಯಿಲೆ ಇರುವುದು ಖಚಿತವಾಗಿದೆ. ಸದ್ಯ ಆತನಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾನೆ ಎನ್ನಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net