ಟೂರಿಸ್ಟ್ ವೀಸಾದಲ್ಲಿ ಬಂದ ವಿದೇಶೀ ಮಹಿಳೆ ಭಾರತದಲ್ಲೇ ಆದಳು ಸೆಟಲ್!

Handcuffs
Published on

ಅಹಮದಾಬಾದ್: ಹದಿನೈದು ದಿನದ ಟೂರಿಸ್ಟ್ ವೀಸಾ ಮೇಲೆ ಭಾರತಕ್ಕೆ ಬಂದ ಇಂಡೋನೇಷಿಯಾದ ಮಹಿಳೆಯೊಬ್ಬಳು ಭಾರತೀಯನನ್ನು ಮದುವೆ ಆಗಿ ಎಂಟು ವರ್ಷಗಳಿಂದ ಇಲ್ಲೇ ನೆಲೆಸಿದ್ದಾಳೆ! ಹೆಸರು ಬದಲಿಸಿಕೊಂಡು, ಭಾರತೀಯ ನಾಗರೀಕರಿಗೆ ಮಾತ್ರ ಸಿಗುವ ಆಧಾರ್ ಕಾರ್ಡ್, ಪಾಸ್​ಪೋರ್ಟ್, ವೋಟರ್ ಐಡಿ ಎಲ್ಲವನ್ನೂ ಮಾಡಿಸಿಕೊಂಡಿದ್ದ ಮಹಿಳೆ, ಈಗ ಗಂಡನೊಂದಿಗೆ ಪೊಲೀಸರ ಅತಿಥಿಯಾಗಿದ್ದಾಳೆ.

ಅಹಮದಾಬಾದಿನ ಅದಾಣಿ ಶಾಂತಿಗ್ರಾಂ ಸೊಸೈಟಿಯ ನಿವಾಸಿ ನೀಲು ರೆದಿಯಾ ಅಲಿಯಾಸ್ ಟಿನಿ ಜೋಶಿ ಮತ್ತು ಆಕೆಯ ಗಂಡ ಸಂದೀಪ್ ಜೋಶಿ ಈ ರೀತಿ ಸಿಕ್ಕಿಹಾಕಿಕೊಂಡಿರುವ ದಂಪತಿ. ಈರ್ವರನ್ನೂ ಭಾನುವಾರ (ಫೆಬ್ರವರಿ 14) ಬಂಧಿಸಿರುವ ಅಹಮದಾಬಾದ್ ಪೊಲೀಸರು, ಐಪಿಸಿ ಮತ್ತು ಪಾಸ್​ಪೋರ್ಟ್ ಕಾಯ್ದೆಯಡಿ ಫೋರ್ಜರಿ ಮತ್ತು ಚೀಟಿಂಗ್ ಕೇಸ್​ ದಾಖಲಿಸಿದ್ದಾರೆ.

ಇಂಡೋನೇಷಿಯಾದ ನಾಗರೀಕಳಾದ ನೀಲು, 2013ರಲ್ಲಿ ಚೆನ್ನೈನ ಹೋಟೆಲೊಂದರಲ್ಲಿ ವರ್ಕ್ ವೀಸಾದೊಂದಿಗೆ ಕೆಲಸ ಮಾಡುತ್ತಿದ್ದಾಗ ಸಂದೀಪ್​ನನ್ನು ಭೇಟಿಯಾದಳು. ಅವಳ ವೀಸಾ ಎಕ್ಸ್​ಪೈರ್ ಆದ ಮೇಲೆ ಇಂಡೋನೇಷಿಯಾಗೆ ವಾಪಸಾದ ಆಕೆ, ಮತ್ತೆ 15 ದಿನದ ಟೂರಿಸ್ಟ್ ವೀಸಾ ಪಡೆದು ಭಾರತಕ್ಕೆ ಬಂದಳು. ಆಗ ಮದುವೆಯಾದ ಇಬ್ಬರೂ ಅಹಮದಾಬಾದ್​ನಲ್ಲಿ ಸೆಟಲ್ ಆದರು. 2018ರಲ್ಲಿ ಮ್ಯಾರೇಜ್ ಸರ್ಟಿಫಿಕೇಟ್ ಮತ್ತು ಮನೆ ಬಾಡಿಗೆ ಕರಾರನ್ನು ಬಳಸಿಕೊಂಡು ಸಂದೀಪ್, ನೀಲುವಿಗೆ ತನ್ನ ಹೆಂಡತಿ ಟಿನಿ ಜೋಶಿ ಎಂಬುದಾಗಿ ವೋಟರ್ ಕಾರ್ಡ್ ಮಾಡಿಸಿದ. ನಂತರ ಪಾಸ್​ಪೋರ್ಟ್ ಮತ್ತು ಆಧಾರ್ ಕಾರ್ಡ್​ಗಳನ್ನೂ ಮಾಡಿಸಿದ ಎನ್ನಲಾಗಿದೆ.

ಈ ಬಗ್ಗೆ ಸುಳಿವು ಸಿಕ್ಕ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ದಂಪತಿಯ ಮನೆಗೆ ದಾಳಿಯಿಟ್ಟು, ನಕಲಿ ದಾಖಲಾತಿಗಳನ್ನು ವಶಪಡಿಸಿಕೊಂಡಿದ್ದಾರೆ. ಅಹಮದಾಬಾದ್​ನ ಪ್ರಾದೇಶಿಕ ಪಾಸ್​ಪೋರ್ಟ್ ಅಧಿಕಾರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದೆ ಎಂದು ಸಬ್​ಇನ್ಸ್​ಪೆಕ್ಟರ್ ಎ.ಬಿ.ದೇಸಾಯಿ ತಿಳಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net