

ನವದೆಹಲಿ: ಮೊಸಳೆ ಎಂಬ ಪದ ಕೇಳಿದರೆ ಸಾಕು ಎಲ್ಲರ ಕೈ-ಕಾಲು ನಡುಗುತ್ತದೆ. ಬಹುಶಃ ಆಸ್ಟ್ರೇಲಿಯನ್ ಝೂಕೀಪರ್ ದಿವಂಗತ ಸ್ಟೀವ್ ಇರ್ವಿನ್ ಮಾತ್ರ ಮೊಸಳೆ ಪದ ಕೇಳಿದರೆ ಎಲ್ಲಿಲ್ಲದ ಉತ್ಸಾಹ ಬರುತ್ತಿತ್ತು. ಮೊಸಳೆಯ ಹರಿತವಾದ ಹಲ್ಲು, ದೊಡ್ಡ ದವಡೆ ಮತ್ತು ತೀವ್ರ ನೋಟ ಸಾಕು ಯಾವುದೇ ವ್ಯಕ್ತಿ ಭಯ ಬೀಳಲು, ಅಂತಹುದರಲ್ಲಿ ಮೊಸಳೆ ಏನಾದರೂ ತುಂಬಾ ಹತ್ತಿರಕ್ಕೆ ಬಂದಲ್ಲಿ ಆ ವ್ಯಕ್ತಿ ಭಯದಲೇ ಹೆಪ್ಪುಗಟ್ಟಿಬಿಡುತ್ತಾನೆ.
ಮೊಸಳೆ ತುಂಬಾ ಕೋಪದಿಂದ ದೊಡ್ಡ ಬಾಯಿ ತೆರೆದುಕೊಂಡು ಹತ್ತಿರ ಬಂದರೆ ಯಾರಾದರೂ ಸರಿ ಅಲ್ಲಿಂದ ಕ್ಷಣಾರ್ಧದಲ್ಲಿ ಕಾಲ್ಕಿಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ಮಾಡಿದ ಕೆಲಸ ಎಲ್ಲರ ಗಮನ ಸೆಳೆದಿದೆ. ಮೊಸಳೆಗೆ ಸ್ವಲ್ಪವೂ ಹೆದರದ ಮಹಿಳೆ ಬಾಯಿ ತೆರೆದುಕೊಂಡು, ದಾಳಿ ನಡೆಸುವ ರೀತಿಯಲ್ಲಿ ಬಹಳ ಕೋಪದಿಂದ ಹತ್ತಿರ ಬಂದ ಮೊಸಳೆಯನ್ನು ಕೇವಲ ಬರಿಗೈಯಲ್ಲೇ ಸಮಾಧಾನ ಮಾಡಿದ್ದಾಳೆ.
ನ್ಯಾಚುರಲ್ ಇಸ್ ಅಮೇಜಿಂಗ್ ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಫ್ಲೊರಿಡಾದ ಅತ್ಯಂತ ಸಾಮಾನ್ಯ ಮಹಿಳೆ ಎಂಬ ಶೀರ್ಷಿಕೆ ನೀಡಿದ್ದಾರೆ. ಇಂದು ಬೆಳಗ್ಗೆ 4.36ಕ್ಕೆ ಈ ವಿಡಿಯೋ ಅಪ್ಲೋಡ್ ಮಾಡಿದ್ದು, ಕೇವಲ 12 ಗಂಟೆ ಸಮಯದಲ್ಲಿ 1.1 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಕಂಡಿದೆ. 10 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. 200ಕ್ಕೂ ಹೆಚ್ಚು ಮಂದಿ ಕಾಮೆಂಟ್ ಮಾಡಿದ್ದು, ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದಾರೆ.
ಮೊಸಳೆಯ ದೃಶ್ಯ ಆಕರ್ಷಕವಾಗಿದ್ದರೂ, ವೀಕ್ಷಕರ ಪ್ರತಿಕ್ರಿಯೆಗಳು ಕೂಡ ಅಷ್ಟೇ ಮನರಂಜನೆಯನ್ನು ನೀಡುತ್ತವೆ. ಮಹಿಳೆಯ ಆತ್ಮವಿಶ್ವಾಸವನ್ನು ನೆಟ್ಟಿಗರು ಕೊಂಡಾಡಿದ್ದಾರೆ. ನೆಟ್ಟಿಗನೊಬ್ಬ ಇಬ್ಬರೂ ಒಂದೇ ಸಮಯದಲ್ಲಿ ಅಲೆದಾಡುವುದು ಸುರಕ್ಷಿತವೇ? ಎಂದು ವ್ಯಂಗ್ಯವಾಡಿದ್ದಾನೆ. ಒಬ್ಬರಿಗೊಬ್ಬರು ದಾಳಿ ಮಾಡಿದ್ದರೆ ಏನಾಗುತ್ತಿತ್ತು ಎಂದು ಮೊತ್ತೊಬ್ಬ ನೆಟ್ಟಿಗ ಪ್ರಶ್ನಿಸಿದ್ದಾನೆ. ಕ್ಯಾಮೆರಾ ಮುಂದೆ ತಾನು ಮಾದರಿಯಂತೆ ನಡೆಯುತ್ತಿದೆ ಎಂದು ಮೊಸಳೆಯನ್ನು ನೆಟ್ಟಿಗನೊಬ್ಬ ಮೆಚ್ಚಿಕೊಂಡಿದ್ದಾನೆ. ಹೀಗಾಗಿ ಸಾಕಷ್ಟು ಕಾಮೆಂಟ್ಗಳು ಹರಿದುಬರುತ್ತಿವೆ. (ಏಜೆನ್ಸೀಸ್)