ಡ್ರಗ್ಸ್ ದಂಧೆಗೆ ನೋ ಎಂದಿದ್ದಕ್ಕೆ ಮಹಿಳೆ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ಸೆರೆಯಾಯ್ತು ಭೀಕರ ದೃಶ್ಯ | Attack on flower seller

Attack on flower seller
ರಸ್ತೆಬದಿ ಹೂವು ಮಾರುತ್ತಿದ್ದ ಮಹಿಳೆ ಮೇಲೆ ದೊಣ್ಣೆ ಮತ್ತು ರಾಡ್‌ಗಳಿಂದ ಹಲ್ಲೆ
Published on: 

Delhi flower seller assault: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮತ್ತೊಂದು ಕರಾಳ ಕೃತ್ಯ ಬೆಳಕಿಗೆ ಬಂದಿದೆ. ಡ್ರಗ್ಸ್ ಮಾರಾಟ ಮಾಡಲು ನಿರಾಕರಿಸಿದ ರಸ್ತೆಬದಿ ಹೂವು ಮಾರುವ ಮಹಿಳೆ ಮೇಲೆ ದುಷ್ಕರ್ಮಿಗಳ ಗುಂಪೊಂದು ದೊಣ್ಣೆ ಹಾಗೂ ರಾಡ್‌ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ದಕ್ಷಿಣ ದೆಹಲಿಯ ಹೌಜ್ ಖಾಸ್ ಪೊಲೀಸ್ ಠಾಣೆ ವ್ಯಾಪ್ತಿಯ ಗೌತಮ್ ನಗರದಲ್ಲಿರುವ ಏಮ್ಸ್ (AIIMS) ರಸ್ತೆ ಬಳಿ, ನವೆಂಬರ್ 8ರಂದು ರಸ್ತೆಬದಿ ಹೂವು ವ್ಯಾಪಾರ ಮಾಡುತ್ತಿದ್ದ ಮಹಿಳೆ ಮತ್ತು ಅವರ ಸಂಬಂಧಿಯ ಮೇಲೆ ಯುವಕರ ಗುಂಪೊಂದು ದೊಣ್ಣೆ ಹಾಗೂ ರಾಡ್‌ಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಹಲ್ಲೆಗೆ ಅಸಲಿ ಕಾರಣವೇನು?

ಸಂತ್ರಸ್ತೆಯ ಆಪ್ತರ ಪ್ರಕಾರ, ರಸ್ತೆಬದಿ ಹೂವು ಮಾರಾಟದ ಜತೆಗೆ ಡ್ರಗ್ಸ್ ಮಾರುವಂತೆಯೂ ಸ್ಥಳೀಯ ಕಿಡಿಗೇಡಿಗಳು ಮಹಿಳೆಯ ಮೇಲೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ಆದರೆ ಮಹಿಳೆ ಕಡ್ಡಿಮುರಿದಂತೆ ನಿರಾಕರಿಸಿದ್ದರು. ಇದರಿಂದ ಸಿಟ್ಟಿಗೆದ್ದ ದುಷ್ಕರ್ಮಿಗಳ ಗುಂಪು ಮಹಿಳೆ ಮೇಲೆ ಏಕಾಏಕಿ ಈ ಅಮಾನುಷ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಈ ಹಲ್ಲೆಗೆ ನಿಖರವಾದ ಕಾರಣ ಏನು ಎಂಬುದು ದೆಹಲಿ ಪೊಲೀಸರ ಅಧಿಕೃತ ತನಿಖೆಯಿಂದಷ್ಟೇ ಹೊರಬರಬೇಕಿದೆ.

ಆರೋಪಿಗಳ ಬಂಧನ

ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತರು ಪೊಲೀಸ್ ಠಾಣೆಗೆ ಯಾವುದೇ ಲಿಖಿತ ದೂರು ನೀಡಿರಲಿಲ್ಲ. ಆದರೆ, ಹಲ್ಲೆಯ ಸಿಸಿಟಿವಿ ದೃಶ್ಯಗಳು ಸಾಮಾಜিক ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ದೆಹಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಪೆಟ್ರೋಲ್​ನಲ್ಲಿ ಕಾಲು ತೊಳೆಯೋ ಭೂಪ: ಸೋಶಿಯಲ್ ಮೀಡಿಯಾದಲ್ಲಿ ಹೊಸ ಹುಚ್ಚಾಟ! | Washing feet with petrol

ಸಂತ್ರಸ್ತ ಮಹಿಳೆಯ ಹೇಳಿಕೆಯನ್ನು ದಾಖಲಿಸಿಕೊಂಡಿರುವ ಪೊಲೀಸರು, ಕೃತ್ಯದಲ್ಲಿ ಭಾಗಿಯಾಗಿದ್ದ ಮೂವರು ಅಪ್ರಾಪ್ತರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದಿದ್ದಾರೆ. ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.