ಗಿನ್ನೀಸ್​ ಬುಕ್ ಸೇರಿದ 63 ವರ್ಷದ ಮಹಿಳೆ; ಆದರೆ ಈಕೆಗೆ ಸ್ಥಳೀಯರು ಕಟ್ಟಿದ್ದು ಮಾಟಗಾತಿ ಪಟ್ಟ..ಪ್ರಸಿದ್ಧಿಯ ಹಿಂದೆ ಸಂಕಟ...

GInnis 2 Feb 20
Published on

ನವದೆಹಲಿ: ಇಲ್ಲೋರ್ವ 63 ವರ್ಷದ ಮಹಿಳೆಯ ಹೆಸರು ಗಿನ್ನೀಸ್​ ಬುಕ್​ನಲ್ಲಿ ದಾಖಲಾಗಿದೆ. ಆದರೆ ಈ ಗಿನ್ನೀಸ್​ ರೆಕಾರ್ಡ್​ಗೆ ಕಾರಣ ಅವರ ಕೈ ಮತ್ತು ಕಾಲಿನ ಬೆರಳುಗಳು...!

ಕುಮಾರಿ ನಾಯಕ್​ (63) ಓಡಿಶಾದ ಗಂಜಮ್​ ಜಿಲ್ಲೆಯವರು. ಇವರಿಗೆ ಒಟ್ಟ 19 ಕಾಲುಬೆರಳುಗಳು ಮತ್ತು 12 ಕೈಬೆರಳುಗಳು ಇವೆ. ಜಗತ್ತಿನಲ್ಲಿಯೇ ಅತಿಹೆಚ್ಚು ಬೆರಳುಗಳನ್ನು ಹೊಂದಿದವರು ಎಂದು ಗಿನ್ನೀಸ್​ ದಾಖಲೆ ನಿರ್ಮಿಸಿದ್ದಾರೆ.

ಅತಿ ಹೆಚ್ಚು ಬೆರಳುಗಳನ್ನು ಹೊಂದಿರುವ ಕಾರಣಕ್ಕೆ ಇವರು ಪ್ರಸಿದ್ಧರಾಗಿದ್ದಾರೆ. ಆದರೆ ಈ ದಾಖಲೆ, ಪ್ರಸಿದ್ಧಿಯೆಲ್ಲ ಖಂಡಿತ ಖುಷಿಕೊಡುವ ವಿಚಾರವಲ್ಲ. ಈ ಮಹಿಳೆಗೆ ಹೀಗೆ ಹೆಚ್ಚು ಬೆರಳುಗಳು ಇರಲು ಕಾರಣ ಪಾಲಿಡಾಕ್ಟೈಲಿಸಮ್ ಎಂಬ ಸಮಸ್ಯೆ. ಸೂಕ್ತ ಚಿಕಿತ್ಸೆ ತೆಗೆದುಕೊಂಡರೆ ಇದರಿಂದ ಪಾರಾಗಬಹುದು. ಆದರೆ ಆಕೆಯದು ಬಡ ಕುಟುಂಬ. ಹಣವಿಲ್ಲ. ಅಗತ್ಯಕ್ಕಿಂತ ಹೆಚ್ಚು ಬೆರಳುಗಳು ಇರುವ ಕಾರಣ ಆಕೆ ಸಾಮಾನ್ಯರಂತೆ ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ.

ಕುಮಾರಿ ನಾಯಕ್​ಗೆ ಇನ್ನೊಂದು ಬಲವಾದ ನೋವಿದೆ. ತನಗಿರುವ ಹೆಚ್ಚು ಬೆರಳುಗಳ ಬಗ್ಗೆ ಸ್ಥಳೀಯರಿಗೆ ತುಂಬ ತಪ್ಪು ಕಲ್ಪನೆಗಳು ಇವೆ ಎಂದು ನೊಂದುಕೊಂಡು ಹೇಳುತ್ತಾರೆ. ಬಹುತೇಕ ಜನರು ನನ್ನನ್ನು ದೂರವೇ ಇಡುತ್ತಾರೆ. ನನ್ನ ಅಸಹಜತೆಯಿಂದಾಗಿ ನಾನೊಬ್ಬಳು ಮಾಟಗಾತಿ ಎಂದು ಭಾವಿಸುತ್ತಿದ್ದಾರೆ. ನನ್ನಿಂದ ದೂರವೇ ಉಳಿಯುತ್ತಿದ್ದಾರೆ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ನನಗೆ ಮನೆಯಿಂದ ಹೊರಗೆ ಬರುವುದೇ ಕಷ್ಟವಾಗಿದೆ. ಯಾರೂ ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಸುಮಾರು ವರ್ಷಗಳಿಂದಲೂ ಮನೆಯೊಳಗೇ ಇದ್ದ ಈಕೆಯ ಬಗ್ಗೆ ಈಗ ಸರ್ಕಾರಿ ಅಧಿಕಾರಿಗಳು ಗಮನಹರಿಸಿದ್ದಾರೆ. ಆಕೆಯ ಸಹಾಯಕ್ಕೆ ಧಾವಿಸಿದ್ದಾರೆ ಎನ್ನಲಾಗಿದೆ. ಕುಮಾರಿ ನಾಯಕ್​ಗೆ ಬೇರೆ ಮನೆ ನೀಡಲಾಗಿದ್ದು, ಪಿಂಚಣಿ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಆಕೆಗಿರುವ ಸಮಸ್ಯೆಯ ಬಗ್ಗೆ ಸ್ಥಳೀಯರಿಗೆ ಮನವರಿಕೆ ಮಾಡಿಕೊಡುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

2014ರಲ್ಲಿ ದೇವೇಂದ್ರ ಸುತಾರ್ ಎಂಬುವರು ಜಗತ್ತಿನಲ್ಲಿಯೇ ಅತಿ ಹೆಚ್ಚು ಬೆರಳುಗಳುಳ್ಳ ವ್ಯಕ್ತಿ ಎಂದು ಗಿನ್ನೀಸ್​ ರೆಕಾರ್ಡ್​ ಮಾಡಿದ್ದರು. ಅವರಿಗೆ 14 ಕೈಬೆರಳುಗಳು, 14 ಕಾಲ್ಬೆರಳುಗಳು ಇದ್ದವು. ಅವರ ದಾಖಲೆಯನ್ನು ಕುಮಾರಿ ನಾಯಕ್​ ಸರಿಗಟ್ಟಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net