

ನವದೆಹಲಿ: ಕರೊನಾ ಸೋಂಕಿನಿಂದ ಪಾರಾಗಲು ಸೋಶಿಯಲ್ ಡಿಸ್ಟೆನ್ಸ್ ಕಡ್ಡಾಯವೆಂದು ವೈದ್ಯಲೋಕವೇ ಹೇಳುತ್ತಿದೆ. ಇದು ಸಾರ್ವಜನಿಕ ಸ್ಥಳ ಮಾತ್ರವಲ್ಲ, ಮದುವೆ-ಸಭೆ-ಸಮಾರಂಭಕ್ಕೂ ಅನ್ವಯ. ಮಹಾಮಾರಿ ಕೋವಿಡ್ನ ಭೀಕರತೆ ಅರಿತವರು ಮನೆಯ ಕಾರ್ಯಕ್ರಮಗಳಲ್ಲೂ ಪರಸ್ಪರ ದೈಹಿಕ ಅಂತರ ಕಾಪಾಡಿಕೊಂಡು ಹೋಗುತ್ತಿದ್ದಾರೆ. ಹಲವರು ಆನ್ಲೈನ್ ಮೂಲಕವೇ ಮದುವೆಯನ್ನು ಕಣ್ತುಂಬಿಕೊಂಡಿದ್ದಾರೆ. ಇನ್ನೂ ಕೆಲವರು ವಾಟ್ಸ್ಆ್ಯಪ್ ವಿಡಿಯೋ ಕಾಲ್ ಮೂಲಕವೇ ಮನೆಗೆ ಸೊಸೆ ತುಂಬಿಸಿಕೊಳ್ಳುವ ಶಾಸ್ತ್ರವನ್ನೂ ಮಾಡಿದ್ದನ್ನು ಕೇಳಿದ್ದೇವೆ. ಇದೀಗ ಮತ್ತೊಂದು ಇಂತಹದ್ದೇ ಘಟನೆ ಸಂಭವಿಸಿದ್ದು, ವಿಡಿಯೋ ವೈರಲ್ ಆಗಿದೆ.
ಮಹಿಳೆಯೊಬ್ಬರು ವಧುವಿಗೆ 'ಪೇಂಟ್ ರೋಲರ್' ಮೂಲಕ ಅರಿಶಿನ ಶಾಸ್ತ್ರ ನೆರವೇರಿಸಿದ್ದಾರೆ. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಈ ವಿಡಿಯೋ ನೋಡೋಕೆ ಸಖತ್ ಫನ್ನಿ ಅನ್ನಿಸಿದರೂ ಒಂಥರಾ ಡಿಫರೆಂಟ್ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಹರ್ಜಿಂದರ್ ಸಿಂಗ್ ಕುಕ್ರೇಜಾ ಎಂಬುವವರು ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಾಕಿದ್ದು, 'ಹೊಸತನದಲ್ಲಿ ಹಳದಿ ಶಾಸ್ತ್ರ. ಇದು ಕೋವಿಡ್ ಫರಿಣಾಮ' ಎಂದು ಬರೆದುಕೊಂಡಿದ್ದಾರೆ. ಈ ಮದುವೆ ಲೂಧಿಯಾನದಲ್ಲಿ ನಡೆದಿದೆ.
ಭಾರತದಲ್ಲಿ ಮದುವೆ ಮುಹೂರ್ತಕ್ಕೂ ಮುನ್ನ ವಧು-ವರನಿಗೆ ಎರಡೂ ಕುಟುಂಬಸ್ಥರು ಸೇರಿಗೆ ಈ ಶಾಸ್ತ್ರವನ್ನು ಮಾಡುತ್ತಾರೆ. ಎಣ್ಣೆ- ಅರಿಶಿನ ಪುಡಿ ಮಿಕ್ಸ್ ಮಾಡಿ ಅದನ್ನು ವರ ಮತ್ತು ವಧುವಿನ ಕೆನ್ನೆ, ಕೈ-ಕಾಲುಗಳಿಗೆ ಹಚ್ಚಿ, ಅಕ್ಷತೆಕಾಳು ಹಾಕಿ ಆರ್ಶೀವದಿಸುತ್ತಾರೆ. ಆನಂತರ ಸ್ನಾನ ಮಾಡಿಸುತ್ತಾರೆ. ಕೋವಿಡ್ ಆತಂಕದಲ್ಲಿ ದೈಹಿಕ ಅಂತರ ಕಾಪಾಡಿಕೊಂಡು ಮದುವೆಯ ಎಲ್ಲ ಶಾಸ್ತ್ರಗಳನ್ನೂ ನೆರವೇರಿಸಲು ವಿಭಿನ್ನವಾಗಿ ಯೋಚಿಸಿದ ಮಹಿಳೆಯೊಬ್ಬರು ಪೇಂಟ್ರೋಲರ್ ಮೂಲಕ ವಧುವಿಗೆ ಅರಿಶಿನ ಹಚ್ಚಿದ್ದಾರೆ.