

ಬೆಂಗಳೂರು: ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರ ಹುದ್ದೆಯಿಂದ ವಿಧಾನಪರಿಷತ್‌ನ ಮಾಜಿ ಸದಸ್ಯ ಅಬ್ದುಲ್ ಅಜೀಮ್ ಅವರ ನಾಮನಿರ್ದೇಶನ ಹಿಂಪಡೆದಿರುವ ರಾಜ್ಯ ಸರ್ಕಾರದ ಕ್ರಮವನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಜತೆಗೆ ಸರ್ಕಾರದ ಅಧೀನದ ಆಯೋಗಗಳಿಗೆ ಅಧ್ಯಕ್ಷರ ನಾಮನಿರ್ದೇಶನ ಮಾಡುವುದು ಮತ್ತು ಹಿಂಪಡೆಯುವುದು ಸರ್ಕಾರದ ವಿವೇಚನೆಗೆ ಒಳಪಟ್ಟಿರಲಿದ್ದು, ಈ ಪ್ರಕ್ರಿಯೆಯಲ್ಲಿ ನೋಟಿಸ್ ನೀಡದೆ ಏಕಪಕ್ಷೀಯವಾಗಿ ನಾಮನಿರ್ದೇಶನ ಹಿಂಪಡೆಯಲಾಗಿದೆ ಎನ್ನುವ ಸರ್ಕಾರದ ಕ್ರಮವನ್ನು ಪ್ರಶ್ನಿಸಲು ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ತಮ್ಮನ್ನು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರ ಸ್ಥಾನಕ್ಕೆ ನಾಮ ನಿರ್ದೇಶನ ಹಿಂಪಡೆದಿದ್ದ ಕ್ರಮ ಪ್ರಶ್ನಿಸಿ ಅಬ್ದುಲ್ ಅಜೀಮ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ನ್ಯಾಯಪೀಠ ಖುಸ್ರೋ ಖುರೇಷಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪುನ್ನು ಉಲ್ಲೇಖಿಸಿ ಅಲ್ಪಸಂಖ್ಯಾತ ಆಯೋಗದ ಸೆಕ್ಷನ್ 4 ಪ್ರಕಾರ ಆಯೋಗದ ಅಧ್ಯಕ್ಷರನ್ನು ನೇಮಕ ಮತ್ತು ರದ್ದು ಮಾಡುವುದು ಸರ್ಕಾರ ವಿವೇಚನೆಗೊಳಪಟ್ಟಿರುತ್ತದೆ. ಇದನ್ನು ಕಾನೂನುಬಾಹಿರ ಎನ್ನಲಾಗದು ಎಂದಿದೆ.
ಅಲ್ಲದೆ, ಅರ್ಜಿದಾರರು ಯಾವುದೇ ಹಕ್ಕನ್ನು ಕಸಿದುಕೊಂಡಂತಾಗುವುದಿಲ್ಲ. ಸೆಕ್ಷನ್ 4ರ ಪ್ರಕಾರ ಸರ್ಕಾರ ವಿವೇಚನೆಯಂತೆ ನಾಮನಿರ್ದೇಶನಗೊಂಡಿದ್ದಾರೆ. ಹಾಗಾಗಿ ಈ ರೀತಿಯ ನಾಮ ನಿರ್ದೇಶನವನ್ನು ಸರ್ಕಾರವೇ ರದ್ದುಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಹೇಳಲಾಗದು ಎಂದು ಪೀಠ ತಿಳಿಸಿದೆ.