ಭ್ರಷ್ಟಾಚಾರ ಆರೋಪ ಹಿಂಪಡೆಯಿರಿ ಇಲ್ಲವೇ ಸಿಬಿಐ ತನಿಖೆಗೆ ಒಪ್ಪಿಸಿ: ಮುಖ್ಯಮಂತ್ರಿಗೆ ಬಿಜೆಪಿ ಸಂಸದ ಆಗ್ರಹ

Kota Srinivas Poojari
Published on

ಬೆಂಗಳೂರು: ಸದನದ ಒಳಗೆ, ಹೊರಗೆ ಭ್ರಷ್ಟಾಚಾರದ ಸುಳ್ಳು ಆರೋಪದ ಹೇಳಿಕೆ ಹಿಂಪಡೆಯಬೇಕು ಅಥವಾ ಸಿಬಿಐಗೆ ತನಿಖೆಗೆ ಒಪ್ಪಿಸಬೇಕು. ಇಲ್ಲದಿದ್ದರೆ ಧರಣಿ ಹೂಡುವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರ ಬರೆದು ಎಚ್ಚರಿಸಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಸಮಾಜ ಕಲ್ಯಾಣ ಸಚಿವರಾಗಿದ್ದ ನನ್ನ ಬಗ್ಗೆ ಸುಳ್ಳು ಆರೋಪ ಹೊರಿಸಿದ್ದೀರಿ ಎಂದು ಸಿಎಂ ಧೋರಣೆಯನ್ನು ಕೋಟ ಆಕ್ಷೇಪಿಸಿ, ಎರಡು ಪುಟಗಳ ಪತ್ರ ಬರೆದಿದಾರೆ.

ವಾಸ್ತವಿಕವಾಗಿ ಇಲಾಖೆಯ ಕೊಳವೆ ಬಾವಿ ಟೆಂಡರ್ ಪ್ರಕ್ರಿಯೆ ಬಗ್ಗೆ ತಮ್ಮ ಸಂಪುಟದ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದಾಗ ಅಂದಿನ ಮುಖ್ಯಮಂತ್ರಿ ಬೊಮ್ಮಾಯಿ ಅವರಲ್ಲಿ ವಿನಂತಿಸಿ, ಸಿಐಡಿ ತನಿಖೆ ಶಿಾರಸು ಮಾಡಿರುವೆ. ಸರ್ಕಾರದ ಕಡತಲ್ಲಿರುವುದನ್ನು ಗಮನಿಸಬೇಕು ಎಂದು ಹೇಳಿದ್ದಾರೆ.

ನಗದು ನೇರ ವರ್ಗಾವಣೆ ಅನುಷ್ಠಾನ

ಟೆಂಡರ್ ಪ್ರಕ್ರಿಯೆಯಲ್ಲಿ ಆಗಬಹುದಾದ ಗೊಂದಲ ನಿವಾರಿಸಲು ರಾಜ್ಯದಲ್ಲಿಯೇ ಮೊದಲ ಬಾರಿಗೆ ಕೊಳವೆ ಬಾವಿ ಲಾನುಭವಿಗಳ ರೈತರ ಖಾತೆಗೆ ನಗದು ನೇರ ವರ್ಗಾವಣೆ ಯೋಜನೆಯು ನನ್ನ ಅವಧಿಯಲ್ಲಿ ಅನುಷ್ಠಾನಕ್ಕೆ ಬಂದಿದೆ.

ವಾಲ್ಮೀಕಿ ನಿಗಮದ ಪ್ರಕರಣದಲ್ಲಿ ತಮ್ಮ ಸರ್ಕಾರಕ್ಕೆ ಸಂಕಷ್ಟ ಎದುರಾದ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ವಿರೋಧ ಪಕ್ಷವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಬೇಕು ಎಂಬುದು ತಮ್ಮ ನಿಲುವು.

ಇದರ ಭಾಗವಾಗಿ ಭೋವಿ ನಿಗಮದ ಭ್ರಷ್ಟಾಚಾರ ವಿಷಯದಲ್ಲಿ ನನ್ನ ಹೆಸರು ಉಲ್ಲೇಖಿಸಿದ್ದು, ನಾನು ಸಚಿವನಾಗಿ ಅಧಿಕಾರ ಸ್ವೀಕರಿಸಿದ ಸಂದರ್ಭ ಹಿಂದೆ ಆಡಳಿತ ನಡೆಸಿದ ತಮ್ಮ ಸರ್ಕಾರದ ಅವಧಿಯಲ್ಲಿ ನೇಮಕವಾದ ಭೋವಿ ನಿಗಮದ ಅಧ್ಯಕ್ಷರಿಬ್ಬರು ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿದ್ದಾರೆ ಎಂದು ಮಾಧ್ಯಮಗಳ ವರದಿಯಿಂದ ತಿಳಿಯಿತು.

ಕೂಡಲೇ ಸಂಬಂಧಿತರನ್ನು ಅಮಾನತಿನಲ್ಲಿಟ್ಟು ಸಿಐಡಿ ತನಿಖೆಗೆ ಒಪ್ಪಿಸಿರುವೆ. ಮೂರವರೆ ವರ್ಷ ಮಂತ್ರಿಯಾಗಿದ್ದೆ, ಆ ಅವಧಿಯಲ್ಲಿ ವಿಪಕ್ಷ ನಾಯಕರಾಗಿ ನನ್ನ ಇಲಾಖೆಯ ಬಗ್ಗೆ ಒಂದೇ ಒಂದು ಮಾತನಾಡಿಲ್ಲ.

ಅಧಿಕಾರಕ್ಕೆ ಬಂದು ಒಂದು ವರ್ಷ ಕಳೆದಿದ್ದು, ಈ ಅವಧಿಯಲ್ಲಿ ತನಿಖೆ ನಡೆಸಿ ನಾನು ತಪ್ಪೆಸಗಿದ್ದರೆ ಕ್ರಮಜರುಗಿಸಿ ಜೈಲಿಗೆ ಕಳುಹಿಸಲು ಅಧಿಕಾರವಿತ್ತಲ್ಲ ಎಂದು ಸಿಎಂ ಗೆ ಬರೆದ ಪತ್ರದಲ್ಲಿ ಕೋಟ ಕೇಳಿದ್ದಾರೆ.

ಗೂಳಿಹಟ್ಟಿ ಹೇಳಿಕೆ ಮರೆವು

ಆರೋಪಕ್ಕಾಗಿ ಆರೋಪ ಎಂಬ ಮಾದರಿಯಲ್ಲಿ ನನ್ನ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿರುವುದು ನೋವು ತಂದಿದೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಮಾಡಿದ ಆರೋಪದ ಉಲ್ಲೇಖವಾಗಿದೆ.

ನಂತರ ಸತ್ಯದ ಅರಿವಾಗಿ ಗೂಳಿಹಟ್ಟಿ ಶೇಖರ್ ತಾನು ನೀಡಿದ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರ ಬಗ್ಗೆ ಉದ್ದೇಶಪೂರ್ವಕವಾಗಿ ಸಿಎಂ ಮರೆತಂತಿದೆ ಎಂದು ಹೇಳಿದ್ದಾರೆ.

ಆರೋಪವನ್ನು ಹಿಂಪಡೆಯಬೇಕು ಇಲ್ಲವೇ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿರುವ ಕೋಟ ಶ್ರೀನಿವಾಸ ಪೂಜಾರಿ, ಇಲ್ಲವಾದರೆ ಮುಂದಿನ ವಾರ ವಿಧಾನಸೌಧ ಆವರಣದ ಗಾಂಧಿ ಪ್ರತಿಮೆ ಮುಂದೆ ಧರಣಿ ಹೂಡುವುದಾಗಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net