

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.
ಆಧುನಿಕ ತಂತ್ರಜ್ಞಾನ, ಯಂತ್ರಗಳಿಂದ ಗಳಿಕೆ ಸಾಧ್ಯ
ಸಣ್ಣ ಪ್ರಮಾಣದಲ್ಲಿ ಕೋಲ್ಡ್ ಸ್ಟೋರೇಜ್ ಮಾಡುವ ಮೂಲಕ ಆಹಾರ ಸಂಸ್ಕರಣೆಯ ಉದ್ಯಮ ಆರಂಭಿಸಬಹುದು. ಸ್ಥಳೀಯ ರೈತರ ಬೆಳೆಯನ್ನು ಅಲ್ಲಿ ಸಂರಕ್ಷಿಸುವುದರ ಜತೆಗೆ, ಅವರಿಂದ ಹಣ ಪಡೆದು ಆದಾಯ ಮೂಲ ಮಾಡಿಕೊಳ್ಳಬಹುದು. ಹಾಗೆಯೇ, ಕಡಿಮೆ ಬಂಡವಾಳ ಮತ್ತು ಭೂಮಿಯಲ್ಲಿ ಜಲಕೃಷಿ, ಜೇನುಕೃಷಿ, ಪುಷ್ಪಕೃಷಿ, ಅಣಬೆಕೃಷಿ ಮತ್ತು ಮೌಲ್ಯವರ್ಧಿತ ಆಹಾರ ಉತ್ಪಾದನೆ ಮಾಡುವ ಮೂಲಕ ಹೆಚ್ಚಿನ ಆದಾಯ ಗಳಿಸಬಹುದು. ಹೈನುಗಾರಿಕೆ, ಮೀನು ಸಾಕಣೆ ಕೂಡ ಲಾಭದಾಯಕ. ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆ ಮಾಡುವುದಕ್ಕಾಗಿ ಹಳ್ಳಿಗಳಲ್ಲಿನ ಸ್ವಸಹಾಯ ಗುಂಪುಗಳನ್ನು ಬಳಸಿಕೊಳ್ಳಬಹುದು. ಸದ್ಯ ಬೇಡಿಕೆ ಹೆಚ್ಚಿರುವ ಸಾವಯವ ಕೃಷಿ ಉತ್ಪನ್ನಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬಹುದು. ಔಷಧ ಸಿಂಪಡಣೆ, ಭತ್ತ-ರಾಗಿ ಪೈರುಗಳ ಕಟಾವು ಯಂತ್ರ, ಟಿಲ್ಲರ್, ಟ್ರಾ್ಯಕ್ಟರ್ಗಳಂತಹ ಯಂತ್ರಗಳ ಖರೀದಿಗೆ ಸರ್ಕಾರದ ಕೆಲ ಯೋಜನೆಗಳಿಂದ ಆರ್ಥಿಕ ನೆರವು ದೊರೆಯಲಿದ್ದು ಅದನ್ನು ಖರೀದಿಸಿ ಸ್ಥಳೀಯವಾಗಿ ಬಾಡಿಗೆಗೆ ನೀಡುವ ಮೂಲಕವೂ ಆದಾಯ ಗಳಿಸಬಹುದು. ಆಹಾರ ಸಂಸ್ಕರಣೆ, ಮೌಲ್ಯವರ್ಧನೆ ಘಟಕಗಳ ಸ್ಥಾಪನೆ, ಆದಾಯ ಬರುವ ಅಲಂಕಾರಿಕ ಹೂಗಳ ಉತ್ಪಾದನೆ ಹೀಗೆ ಹಲವು ಅವಕಾಶಗಳಿವೆ. ಇತ್ತೀಚಿನ ದಿನಗಳಲ್ಲಿ ಹಲವು ತಂತ್ರಜ್ಞಾನಗಳು ಕೃಷಿಯಲ್ಲಿ ಪರಿಚಯವಾಗುತ್ತಿವೆ. ಮೊಬೈಲ್ ಅಪ್ಲಿಕೇಷನ್ ಮೂಲಕ ಕೃಷಿ ಭೂಮಿಗೆ ನೀರಾವರಿ ಮಾಡುವುದು, ಡ್ರೋನ್ ಬಳಕೆ, ಬೆಳೆಗಳ ಕಳ್ಳತನ ತಡೆಯಲು ಸೆನ್ಸರ್ ಆಧಾರಿತ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಅದನ್ನು ರೈತರ ಬಳಿಗೆ ಕೊಂಡೊಯ್ದು ಪರಿಚಯಿಸುವ ಕೆಲಸ ಮಾಡಬಹುದು. ಅದರಿಂದಲೂ ಯುವಜನತೆ ಆದಾಯ ಗಳಿಸಬಹುದಾಗಿದೆ.
| ಡಾ. ವೈ.ಜಿ. ಷಡಕ್ಷರಿ ಸಂಶೋಧನಾ ನಿರ್ದೇಶಕ, ಬೆಂಗಳೂರು ಕೃಷಿ ವಿಶ್ವವಿದ್ಯಾಲಯ