ಶುಲ್ಕ ಇಳಿಕೆಗೆ ವೈನ್ ಮರ್ಚಂಟ್ಸ್ ಮನವಿ

Wine
Published on

ಬೆಂಗಳೂರು: ಪರವಾನಗಿ ನವೀಕರಣ, ಕಾಕಂಬಿ ಮೇಲಿನ ಶುಲ್ಕ ಇಳಿಕೆ ಸೇರಿ 10 ಬೇಡಿಕೆಗಳನ್ನು ಈಡೇರಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಫೆಡರೇಷನ್ ಆಫ್ ವೈನ್ ಮರ್ಚಂಟ್ಸ್ ಅಸೋಸಿಯೇಷನ್ ನಿಯೋಗ ಮನವಿ ಮಾಡಿದೆ.

ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ನಿಯೋಗ ಮನವಿ ಪತ್ರ ಸಲ್ಲಿಸಿ ಬೇಡಿಕೆಗಳನ್ನು ವಿವರಿಸಿದರು. ಪ್ರಮುಖವಾಗಿ ಅಬಕಾರಿ ಪರವಾನಗಿ ನವೀಕರಣ ಶುಲ್ಕ, ಕಾಕಂಬಿ ಮೇಲಿನ ಶುಲ್ಕ ಕಡಿಮೆ ಮಾಡುವಂತೆ ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ಸಿದ್ದರಾಮಯ್ಯ, ಅಬಕಾರಿ ಸಚಿವ ಮತ್ತು ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಶೀಲಿಸುವುದಾಗ ಭರವಸೆ ಕೊಟ್ಟಿದ್ದಾರೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ವೈನ್ ಮರ್ಚಂಟ್ಸ್ ಅಸೋಸಿಯೇಷನ್ ಕೆಲವು ಬೇಡಿಕೆಗಳನ್ನು ಇಟ್ಟಿದೆ. ಈ ಸಭೆಯಲ್ಲಿ ಯಾವುದೇ ನಿರ್ಧಾರವಾಗಿಲ್ಲ. ಹಣಕಾಸು ಇಲಾಖೆ ಜತೆಗೆ ಚರ್ಚೆ ನಡೆಸಿ ಮತ್ತೊಂದು ಸಭೆ ಬಳಿಕ ನಿರ್ಧಾರವಾಗಬೇಕಿದೆ ಎಂದರು.

ಸಭೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೇರಿ ಆರ್ಥಿಕ ಇಲಾಖೆ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net