

ರಾಣೆಬೆನ್ನೂರ: ಕಳೆದ ಮೂರ್ನಾಲ್ಕು ದಿನದಿಂದ ಸತತವಾಗಿ ಸುರಿದ ಮಳೆಯಿಂದಾಗಿ ನಗರ ಸೇರಿ ತಾಲೂಕಿನ ಜನ ಹೈರಾಣಾಗಿದ್ದಾರೆ. ಬಿಟ್ಟೂ ಬಿಡದೆ ಮಳೆ ಸುರಿಯುತ್ತಿರುವ ಕಾರಣ ಜನಜೀವನ ಅಸ್ತವ್ಯಸ್ತವಾಗಿದೆ. ಜನರು ಮನೆಯಿಂದ ಹೊರ ಬರಲು ಹಿಂದುಮುಂದು ನೋಡುವಂತಾಗಿದೆ.
ಕೃಷಿ ಬೆಳೆಗಳಿಗೆ ವರದಾನ ವಾದರೆ, ತೋಟಗಾರಿಕೆ ಬೆಳೆಗಳಿಗೆ ಕಂಟಕವಾಗಿ ಮಾರ್ಪಟ್ಟಿದೆ. ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗಿದೆ. ಇನ್ನೊಂದೆಡೆ ಗ್ರಾಮಾಂತರ ಪ್ರದೇಶದಲ್ಲಿರುವ ಮಣ್ಣು ರಸ್ತೆಗಳು ಕೆಸರುಗದ್ದೆಯಂತಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ.
ಖುಷಿ ನಡುವೆ ಸಂಕಷ್ಟ…
ಮಳೆಯೂ ಸೋಮವಾರ ಹಾಗೂ ಮಂಗಳವಾರ ರಾತ್ರಿಯಿಡಿ ನಿರಂತರವಾಗಿ ಸುರಿದಿದೆ. ಬುಧವಾರವೂ ಬೆಳಗ್ಗೆಯಿಂದಲೇ ಆಗಾಗ ಜಿಟಿಜಿಟಿಯಾಗಿ ಸುರಿಯುತ್ತಿದ್ದು, ಇನ್ನೂ ಐದಾರು ದಿನ ಮಳೆ ಸುರಿಯುವ ಸಾಧ್ಯತೆ ಇದೆ. ಹೀಗಾಗಿ ಈಗಾಗಲೇ ಹಿಂಗಾರು ಬಿತ್ತನೆ ಮಾಡಿರುವ ರೈತರು ಸಂತಸಗೊಂಡಿದ್ದರೆ, ತೋಟಗಾರಿಕೆ ಬೆಳೆಗಳಾದ ಟೊಮ್ಯಾಟೊ, ಎಲೆಬಳ್ಳಿ ಸೇರಿ ಇತರ ಬೆಳೆಗಳಿಗೆ ನಾನಾ ರೋಗ ಆವರಿಸುವ ಆತಂಕ ಎದುರಾಗಿದೆ. ಇದರಿಂದ ತೋಟಗಾರಿಕೆ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.
ತರಕಾರಿ, ಹೂವು ಬೆಳೆಗಾರರಿಗೆ ತೊಂದರೆ…
ಒಂದೆಡೆ ತಾಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವುದು ಖುಷಿ ವಿಚಾರ. ಆದರೆ, ಸತತವಾಗಿ ಮಳೆ ಸುರಿಯುತ್ತಿರುವುದರಿಂದ ತರಕಾರಿ ಮತ್ತು ಹೂವಿನ ಬೆಳೆಗಳಿಗೆ ರೋಗದ ಕಾಟ ಹೆಚ್ಚಾಗಿದೆ. ಇದೇ ರೀತಿ ಮಳೆ ಮುಂದುವರಿದರೆ ಇನ್ನಷ್ಟು ತೊಂದರೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮನೆಯಿಂದ ಹೊರಬರಲು ಪರದಾಟ…
ಇನ್ನು ಅನಿವಾರ್ಯವಾಗಿ ಎಲ್ಲಿಗಾದರೂ ಹೋಗ ಬೇಕಾದರೂ ನಿರಂತರವಾಗಿ ಸುರಿಯುತ್ತಿರುವ ಮಳೆ ಅಡ್ಡಿಯಾಗಿದೆ. ಛತ್ರಿ ಹಿಡಿದೇ ಮನೆಯಿಂದ ಹೊರಬರಬೇಕು. ಇನ್ನು ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಮಳೆಯಲ್ಲಿ ನೆನೆಯುತ್ತಲೇ ವಾಹನ ಚಾಲನೆ ಮಾಡಬೇಕಿದೆ.
ನೆಲಕಚ್ಚಿದ ಭತ್ತ…
ಮುಂಗಾರು ಹಂಗಾಮಿನಲ್ಲಿ ತಾಲೂಕಿನ ತುಂಗಭದ್ರಾ ನದಿಪಾತ್ರದ ಮೇಡ್ಲೇರಿ, ಚೌಡಯ್ಯದಾನಪುರ, ಹರನಗಿರಿ, ಹಿರೇಬಿದರಿ ಸೇರಿ 50ಕ್ಕೂ ಅಧಿಕ ಗ್ರಾಮಗಳ ರೈತರು ಭತ್ತ ನಾಟಿ ಮಾಡಿದ್ದರು. ಭತ್ತ ಕೂಡ ಉತ್ತಮವಾಗಿ ಬೆಳೆದಿದ್ದು ಸದ್ಯ ತೆನೆ ಕಟ್ಟುತ್ತಿತ್ತು. ಆದರೆ, ನಿರಂತರವಾಗಿ ಸುರಿದ ಮಳೆ ಹಾಗೂ ಗಾಳಿ ತೆನೆ ಕಟ್ಟುವ ಹಂತಕ್ಕೆ ತಲುಪಿದ್ದ ಭತ್ತ ಸಂರ್ಪೂಣ ನೆಲಕಚ್ಚಿ ಹೋಗಿದೆ. ಇದರಿಂದ ಭತ್ತ ಬೆಳೆಗಾರರು ಮಳೆಯಿಂದ ಸಂಕಷ್ಟ ಎದುರಿಸಬೇಕಾಗುತ್ತದೆ.