

ಬೆಂಗಳೂರು: ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ. ಗೆದ್ದರೂ ನಾನು ಗೆದ್ದಂತೆ, ಸೋತರೂ ನಾನು ಸೋತಂತೆ. ಯೋಗೇಶ್ವರ್‌ಗೆ ಟಿಕೆಟ್ ಕೊಟ್ಟಿದ್ದೇ ನಾನು. ನನ್ನ ಮುಖ ಇಟ್ಟುಕೊಂಡೆ ಚುನಾವಣೆ ಮಾಡಿದ್ದೇನೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಅವರು, ಚನ್ನಪಟ್ಟಣದಲ್ಲಿ ನಾನು ಘೋಷಣೆ ಮಾಡಿದ ನಂತರ ಕುಮಾರಸ್ವಾಮಿ ಕೂಡ ನಾನು ಅಭ್ಯರ್ಥಿ ಎಂದು ಹೇಳಿಕೊಂಡಿದ್ದರು. ಚನ್ನಪಟ್ಟಣದಲ್ಲಿ ನಾವು ಗೆಲ್ಲುವ ವಿಶ್ವಾಸದಲ್ಲಿ ನಾವಿದ್ದೇವೆ ಎಂದರು.
ಚುನಾವಣೋತ್ತರವಾಗಿ ನಡೆದಿರುವ ಮೂರು ಸಮೀಕ್ಷೆಗಳ ಫಲಿತಾಂಶ ಉಲ್ಟಾ ಆಗಲಿದೆ. ಆ ಸಮೀಕ್ಷೆ ಸುಳ್ಳಾಗಲಿದೆ. ರಾಜ್ಯ ವಿಧಾನಸಭೆ ಚುನಾವಣೆ, ಹರ್ಯಾಣ ವಿಧಾನಸಭೆ ಚುನಾವಣೆಗಳಲ್ಲಿ ಸಮೀಕ್ಷೆ ಸುಳ್ಳಾಗಿವೆ. ಕಾಂಗ್ರೆಸ್ ಮೂರು ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಬಿಜೆಪಿ ನೀಡಿದ ಜಾಹಿರಾತು ಕುರಿತು ಖಂಡಿತವಾಗಿ ದೂರು ದಾಖಲಿಸುತ್ತೇವೆ, ಈಗಾಗಲೇ ನಮ್ಮ ಮುಖ್ಯಮಂತ್ರಿಗಳು ಈ ವಿಚಾರವಾಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಬಿಜೆಪಿ ನಾಯಕರಿಗೆ ಕನಿಷ್ಠ ಪರಿಜ್ಞಾನವೂ ಇಲ್ಲ. ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ಪರಿಶೀಲನೆ ನಡೆಸಲು ಆಹ್ವಾನಿಸಿ ಜಾಹೀರಾತನ್ನು ನೀಡಿದ್ದೆ. ಈಗ ನಾವು ಅವರ ಮೇಲೆ ಮಾನಹಾನಿ ಪ್ರಕರಣ ದಾಖಲಿಸುತ್ತೇವೆ ಎಂದು ತಿಳಿಸಿದರು.
ಹಾಗೆಯೇ, ಸಚಿವ ಜಮೀರ್ ಅಹ್ಮದ್ ಹೇಳಿಕೆ ವಿಚಾರವನ್ನು ನಾವು ಪಕ್ಷದ ಆಂತರಿಕವಾಗಿ ಚರ್ಚೆ ಮಾಡುತ್ತೇವೆ ಎಂದು ಇದೇ ವೇಳೆ ತಿಳಿಸಿದರು.