

ಬೆಂಗಳೂರು: ಹುಲಿ ಉಗುರು ಪೆಂಡೆಂಟ್ ಧರಿಸಿದ ಆರೋಪದ ಮೇಲೆ ಬಿಗ್ಬಾಸ್ ಮನೆಯಿಂದಲೇ ಬಂಧನವಾಗಿದ್ದ ವರ್ತೂರು ಸಂತೋಷ್ಗೆ ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯ ಜಾಮೀನು ನೀಡಿದೆ. ಇದೀಗ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ ಏನೆಂದರೆ, ಸಂತೋಷ್ ಮತ್ತೆ ಬಿಗ್ಬಾಸ್ ಮನೆಗೆ ಹೋಗ್ತಾರಾ ಎಂಬುದು.
ಸಂತೋಷ್ ಅವರಿಗೆ 4 ಸಾವಿರ ರೂಪಾಯಿ ನಗದು ಭದ್ರತೆ ಅಥವಾ ಒಬ್ಬರ ಶ್ಯೂರಿಟಿ ಒದಗಿಸುವಂತೆ ಷರತ್ತುಬದ್ಧ ಜಾಮೀನು ನೀಡಲಾಗಿದೆ. ಕೆಲವೇ ಕ್ಷಣಗಳಲ್ಲಿ ಪರಪ್ಪನ ಅಗ್ರಹಾರ ಜೈಲಿನಿಂದ ಸಂತೋಷ್ ಬಿಡುಗಡೆಯಾಗಲಿದ್ದಾರೆ. ಅವರನ್ನು ಕರೆದುಕೊಂಡು ಹೋಗಲು ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಕಾರೊಂದು ಜೈಲಿನ ಬಳಿ ನಿಂತಿದ್ದು, ಸಂತೋಷ್ ಮತ್ತೆ ಬಿಗ್ಬಾಸ್ ಮನೆ ತಲುಪುದು ಖಚಿತವಾಗಿದೆ.
ಅ. 8ರಂದು ಆರಂಭವಾದ ಬಿಗ್ಬಾಸ್ 10ನೇ ಸೀಸನ್ನಲ್ಲಿ ಸಂತೋಷ್ ಭಾಗವಹಿಸಿದ್ದರು. ಶೋ ಆರಂಭದ ಪ್ರೀಮಿಯರ್ ಕಾರ್ಯಕ್ರಮದಲ್ಲಿ ಹುಲಿ ಉಗುರು ಧರಿಸೇ ಸಂತೋಷ್ ದೊಡ್ಮನೆ ಪ್ರವೇಶ ಮಾಡಿದ್ದರು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಬಳಿಕ ಬಿಗ್ಬಾಸ್ ಮನೆಯಿಂದಲೇ ಸಂತೋಷ್ ಅವರನ್ನು ಅ.22ರ ಭಾನುವಾರದಂದು ಬಂಧಿಸಲಾಗಿತ್ತು.
ಸಂತೋಷ್ ಬಂಧನದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರು ಪ್ರಕರಣ ಸಾಕಷ್ಟು ಸದ್ದು ಮಾಡಿತು. ದರ್ಶನ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ, ರಾಕ್ಲೈನ್ ವೆಂಕಟೇಶ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಹೆಸರು ಕೂಡ ಈ ಪ್ರಕರಣದಲ್ಲಿ ಪ್ರಸ್ತಾಪವಾಯಿತು. ಈಗಲೂ ಹುಲಿ ಉಗುರು ಪ್ರಕರಣ ಚರ್ಚೆಯಾಗುತ್ತಲೇ ಇದೆ. ಇದರ ನಡುವೆ ಸಂತೋಷ್ಗೆ ಷರತ್ತುಬದ್ಧ ಜಾಮೀನು ದೊರೆತಿದ್ದು, ಮತ್ತೆ ಬಿಗ್ಬಾಸ್ ಮನೆ ಪ್ರವೇಶ ಮಾಡುವುದು ಖಚಿತವಾಗಿದೆ. ಕ್ಯಾಮೆರಾ ಮುಂದೆ ಕಾಣಿಸಿಕೊಂಡ ಬಳಿಕ ಸಂತೋಷ್ ತಮ್ಮ ಬಂಧನದ ಬಗ್ಗೆ ಏನು ಹೇಳುತ್ತಾರೆ ಎಂಬ ಕುತೂಹಲವೂ ಸಹ ಎಲ್ಲರಲ್ಲೂ ಮನೆ ಮಾಡಿದೆ.
ಅಂದಹಾಗೆ ಹಳ್ಳಿಕಾರ್ ತಳಿಯ ಹಸುಗಳ ಸಂರಕ್ಷಣೆ ಮಾಡುವ ಮೂಲಕ ವರ್ತೂರು ಸಂತೋಷ್ ಜನಪ್ರಿಯತೆ ಗಳಿಸಿದ್ದರು. ಇದೇ ಕಾರಣಕ್ಕೆ ಅವರು ಬಿಗ್ ಬಾಸ್ಗೆ ಆಯ್ಕೆ ಆಗಿದ್ದರು. ಟ್ರೋಫಿ ಗೆಲ್ಲಬೇಕು ಎಂಬ ಆಸೆಯಿಂದ ಅವರು ಬಿಗ್ ಮನೆ ಪ್ರವೇಶಿಸಿದ್ದರು. ಆದರೆ ಅವರು ಧರಿಸಿದ್ದ ಹುಲಿ ಉಗುರಿನ ಪೆಂಡೆಂಟ್ ಮೇಲೆ ಅರಣ್ಯಾಧಿಕಾರಿಗಳ ಕಣ್ಣು ಬಿದ್ದಿದ್ದರಿಂದ ಅಕ್ಟೋಬರ್ 22ರ ರಾತ್ರಿ ಬಿಗ್ ಬಾಸ್ ಮನೆಗೆ ಹೋಗಿ ಅವರನ್ನು ಬಂಧಿಸಲಾಯಿತು. ನಂತರ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಈಗ ಜಾಮೀನು ಸಿಕ್ಕಿದೆ.