

ವಾಷಿಂಗ್ಟನ್: ಬಹು ಬಲಿಷ್ಠ ರಾಷ್ಟ್ರವೆನಿಸಿಕೊಂಡಿರುವ ಅಮೆರಿಕದಲ್ಲಿ ಅಧ್ಯಕ್ಷೀಯ ಸ್ಥಾನದ ಪೈಪೋಟಿ ತಾರಕದಲ್ಲಿದೆ. ಬಿಡೆನ್ ಬಹುತೇಕ ರಾಜ್ಯಗಳಲ್ಲಿ ಗೆದ್ದಿದ್ದು, ಇನ್ನು ಕೇವಲ ಐದು ರಾಜ್ಯಗಳ ಫಲಿತಾಂಶ ಹೊರಬೀಳುವುದು ಬಾಕಿಯಿದೆ. ಅದರಲ್ಲಿ ಕೆಲ ರಾಜ್ಯಗಳಲ್ಲಿ ಟ್ರಂಪ್ ಮುನ್ನೆಡೆ ಸಾಧಿಸಿದ್ದರೆ, ಕೆಲ ರಾಜ್ಯಗಳಲ್ಲಿ ಬಿಡೆನ್ ಮುಂದಿದ್ದಾರೆ. ಐದೂ ರಾಜ್ಯಗಳನ್ನು ತಮ್ಮದಾಗಿಸಿಕೊಂಡರೆ ಮಾತ್ರವೇ ಟ್ರಂಪ್ ಎರಡನೇ ಬಾರಿಗೆ ಅಧಿಕಾರಕ್ಕೆ ಬರಲಿದ್ದಾರೆ. ಯಾವುದೇ ರಾಜ್ಯ ಬಿಡೆನ್ ತೆಕ್ಕೆಗೆ ಹೋದರೆ, ಟ್ರಂಪ್ ಸೋಲು ಕಾಣಲಿದ್ದಾರೆ.
ಟ್ರಂಪ್ ಅವರ ರಿಪಬ್ಲಿಕ್ ಮತ್ತು ಜೋ ಬಿಡೆನ್ ಅವರ ಡೆಮಾಕ್ರಟಿಕ್ ಪಕ್ಷಗಳೆರೆಡೂ ಚುನಾವಣೆಗೆ ಮೊದಲು ಭರ್ಜರಿ ಪ್ರಚಾರ ಮಾಡಿದ್ದವು. 2016ರ ಚುನಾವಣೆಯಲ್ಲಿ ಟ್ರಂಪ್ನ ಪಾಲಿಗೆ ಒಲಿದಿದ್ದ ಜಾರ್ಜಿಯಾದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಟ್ರಂಪ್, ಕೊಂಚ ಭಾವನಾತ್ಮಕವಾಗಿ ಮಾತನಾಡಿ ಮತ ಸೆಳೆಯುವ ಪ್ರಯತ್ನ ಮಾಡಿದ್ದರು. "ಒಂದು ವೇಳೆ ನಾನು ಸೋತರೆ? ನನ್ನಿಂದ ಅಂತದ್ದೊಂದು ದಿನವನ್ನು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಬಹುಶಃ ನಾನು ದೇಶವನ್ನು ತ್ಯಜಿಸಬೇಕಾಗಿ ಬರಬಹುದು" ಎಂದು ಹೇಳಿ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದ್ದರು.
ಅಂದು ಟ್ರಂಪ್ ಹೇಳಿದ ಆ ಮಾತೇ ಇಂದು ದೊಡ್ಡ ಸಮಸ್ಯೆಯಾಗಿ ಕಂಡಿದೆ. 16 ಸ್ಥಾನವಿರುವ ಜಾರ್ಜಿಯಾದಲ್ಲಿ ನಿನ್ನೆಯವರೆಗೆ ಟ್ರಂಪ್ ಮುನ್ನೆಡೆ ಸಾಧಿಸಿದ್ದು, ಇದೀಗ ಬಿಡೆನ್ ಮುನ್ನೆಡೆಗೆ ಬಂದಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಟ್ರಂಪ್ ಬದಲು ಬಿಡೆನ್ ಗೆದ್ದು ಬಿಟ್ಟರೆ, ಟ್ರಂಪ್ರ ಮುಂದಿನ ನಡೆ ಏನು ಎನ್ನುವುದು ಎಲ್ಲರ ಕುತೂಹಲ. ಮೊದಲು ಹೇಳಿದಂತೆ ದೇಶ ಬಿಡಬೇಕಾಗುವ ಸ್ಥಿತಿ ಬಂದುಬಿಡುತ್ತದೆಯೇ ಎನ್ನುವುದು ಅನೇಕರ ಪ್ರಶ್ನೆ.
ಈಗಾಗಲೇ ಸೋಲಿನ ಛಾಯೆ ಸಿಕ್ಕಿರುವ ಟ್ರಂಪ್, ಫಲಿತಾಂಶವನ್ನು ಬಿಲ್ಕುಲ್ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ. ಮತ ಎಣಿಕೆಯಲ್ಲಿ ಮೋಸವಾಗಿರುವುದಾಗಿ ದೂರಿರುವ ಅವರು ಈ ಕುರಿತಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿಯೂ ಹೇಳಿಕೊಂಡಿದ್ದಾರೆ. ಫಲಿತಾಂಶ ಸೋಲಾದರೂ ಅದನ್ನು ಅಷ್ಟು ಸುಲಭಕ್ಕೆ ತಾವು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.