

96 Sequel: ತಮಿಳಿನಲ್ಲಿ ಬ್ಲಾಕ್ಬಸ್ಟರ್ ಹಿಟ್ ಚಿತ್ರಗಳನ್ನೇ ನೀಡುತ್ತ ಬಂದಿರುವ ನಿರ್ದೇಶಕ ಸಿ. ಪ್ರೇಮ್ ಕುಮಾರ್, ಇತ್ತೀಚೆಗೆ ತೆರೆಕಂಡ ‘ಮಿಯ್ಯಾಳಗನ್’ ಚಿತ್ರದಲ್ಲಿಯೂ ಅದ್ಭುತ ಯಶಸ್ಸನ್ನು ಕಂಡರು. ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದ ಬೆನ್ನಲ್ಲೇ 2018ರಲ್ಲಿ ಸೂಪರ್ ಹಿಟ್ ಚಿತ್ರಗಳ ಸಾಲಿಗೆ ಸೇರಿದ ತಮ್ಮ ಕಲ್ಟ್ ’96’ ಸಿನಿಮಾದ ಸೀಕ್ವೆಲ್ ತೆರೆಗೆ ತರಲು ನಿರ್ದೇಶಕರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ.
ಬ್ಲಾಕ್ಬಸ್ಟರ್ ರೊಮ್ಯಾಂಟಿಕ್ ತಮಿಳಿನ '96' ಚಿತ್ರಕ್ಕೆ ಕೇವಲ ತಮಿಳು ಚಿತ್ರಪ್ರೇಮಿಗಳು ಮಾತ್ರವಲ್ಲದೇ ಇತರೆ ಭಾಷೆಯ ಅಭಿಮಾನಿಗಳು ಸಹ ನಿರ್ದೇಶಕರ ಕಥೆಗೆ ಮನಸೋತಿದ್ದಾರೆ. ಈಗ ಇದರ ಸೀಕ್ವೆಲ್ ಬರುತ್ತಿದೆ ಎಂಬ ಸುದ್ದಿ ತಿಳಿಯುತ್ತಿದಂತೆ ಒಂದಷ್ಟು ಮಂದಿ ಸಂತಸ, ಕುತೂಹಲ ವ್ಯಕ್ತಪಡಿಸಿದರೆ, ಹಲವರು ಸೀಕ್ವೆಲ್ ಎಲ್ಲ ಬೇಕಿಲ್ಲ. ಮೊದಲ ಭಾಗ ಏನಿತ್ತೋ ಅದೇ ಸಾಕು. ಇದರ ಮುಂದುವರಿದ ಭಾಗ ನಿಜಕ್ಕೂ ಮನಸ್ಸಿಗೆ ಮುದ ನೀಡುವುದಿಲ್ಲ. ರಾಮ್ ಮತ್ತು ಜಾನು ಪಾತ್ರಗಳು ಹಾಗೆಯೇ ಇರಲಿ. ತ್ರಿಶಾ ಮತ್ತು ವಿಜಯ್ ಸೇತುಪತಿ ಪಾತ್ರಗಳು ಇಂದಿಗೂ ನಮ್ಮ ಕಣ್ಣಿನಲ್ಲಿ ಕಟ್ಟಿದಂತಿದೆ. ಹೀಗಾಗಿ ಚಿತ್ರದ ಎರಡನೇ ಭಾಗ ಬೇಡ ಎಂಬ ಮಾತುಗಳನ್ನು ಜಾಲತಾಣಗಳ ಮುಖೇನ ವ್ಯಕ್ತಪಡಿಸಿದ್ದಾರೆ. ಆದ್ರೆ, ನಿರ್ದೇಶಕರು ಮಾತ್ರ ತೆರೆಗೆ ತರಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇತ್ತೀಚಿನ ಪ್ರಶಸ್ತಿ ಸಮಾರಂಭದ ವೇದಿಕೆಯಲ್ಲಿ ಈ ಕುರಿತಂತೆ ಮಾತನಾಡಿದ ನಿರ್ದೇಶಕರು, "96 ಚಿತ್ರದ ಸೀಕ್ವೆಲ್ ಕಥೆಯನ್ನು ಈಗಾಗಲೇ ನಾನು ಬರೆದಿದ್ದೇನೆ. ಪಾತ್ರವರ್ಗದ ಬಗ್ಗೆ ಹೇಳುವುದಾದರೆ, ಮೊದಲ ಭಾಗದಲ್ಲಿ ಕಾಣಿಸಿಕೊಂಡ ಕಲಾವಿದರೇ ಇಲ್ಲಿಯೂ ಇರಲಿದ್ದಾರೆ. ಅದೇ ಪಾತ್ರಗಳಲ್ಲಿ ಅಭಿನಯಿಸಲಿದ್ದಾರೆ. ಇದರಲ್ಲಿ ಯಾವುದೇ ಬದಲಾವಣೆಗಳು ಇಲ್ಲ" ಎಂದಿದ್ದಾರೆ. ಆದರೆ, ರಾಮ್ ಪಾತ್ರದಲ್ಲಿ ವಿಜಯ್ ಸೇತುಪತಿ ಮತ್ತು ಜಾನು ಪಾತ್ರದಲ್ಲಿ ತ್ರಿಶಾ ಅವರೇ ಕಾಣಿಸಿಕೊಳ್ಳಲಿದ್ದಾರಾ ಎಂಬ ಪ್ರಶ್ನೆಗೆ ಅವರಿಂದ ಸ್ಪಷ್ಟ ಉತ್ತರ ಲಭಿಸಿಲ್ಲ ಎಂಬುದು ಇಲ್ಲಿ ಗಮನಾರ್ಹ,(ಏಜೆನ್ಸೀಸ್).