ಈ ವರ್ಷ ಮೌಲ್ಯಾಂಕನ ಪರೀಕ್ಷೆ ಇರುತ್ತಾ?; ಮಂಡಳಿಗೂ ಮಾಹಿತಿ ಇಲ್ಲ | 5,8,9ನೇ ಕ್ಲಾಸ್ ಮಕ್ಕಳಿಗೆ ಗೊಂದಲ

scv
Published on

| ಎನ್.ಎಲ್.ಶಿವಮಾದು ಬೆಂಗಳೂರು

ಪ್ರಸಕ್ತ ಶೈಕ್ಷಣಿಕ ವರ್ಷ ಆರಂಭವಾಗಿ ಅರ್ಧವಾರ್ಷಿಕ ಪರೀಕ್ಷೆ ಸಮೀಪಿಸುತ್ತಿದ್ದರೂ 5,8 ಮತ್ತು 9ನೇ ತರಗತಿಯ ಮೌಲ್ಯಾಂಕನ ಪರೀಕ್ಷೆ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ. ಮೌಲ್ಯಾಂಕನವು ಶಾಲಾ ಹಂತದಲ್ಲೇ ನಡೆಯಲಿದೆಯೋ ಅಥವಾ ಮಂಡಳಿ ವತಿಯಿಂದ ನಡೆಯಲಿದೆಯೋ ಎಂಬ ಬಗ್ಗೆ ಶಿಕ್ಷಣ ಇಲಾಖೆ ಸ್ಪಷ್ಟತೆ ನೀಡದಿರುವ ಪರಿಣಾಮ ವಿದ್ಯಾರ್ಥಿಗಳು, ಪಾಲಕರು ಆತಂಕಕ್ಕೀಡಾಗಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ತಪು್ಪ ನಿರ್ಧಾರಗಳಿಂದ ಕಳೆದ ವರ್ಷ 28.14 ಲಕ್ಷ ಮಕ್ಕಳು ಎರಡೆರಡು ಬಾರಿ ಪರೀಕ್ಷೆ ಬರೆದಿದ್ದರು. ಪರೀಕ್ಷೆ ಬರೆಯುವ ಹಿಂದಿನ ದಿನ ಕೂಡ ಪರೀಕ್ಷೆ ಕುರಿತ ಅನಿಶ್ಚಿತತೆ ಕಾಡಿತ್ತು. ಈ ಎಡವಟ್ಟು ಫಲಿತಾಂಶದ ವಿಚಾರದಲ್ಲೂ ಮುಂದುವರಿದಿತ್ತು. ಸರಿಯಾದ ಫಲಿತಾಂಶ ಪ್ರಕಟವಾಗದ ಕಾರಣ ಶಾಲೆ ಬದಲಾಯಿಸಿದ ವಿದ್ಯಾರ್ಥಿಗಳು ವರ್ಗಾವಣಾ ಪ್ರಮಾಣ ಪತ್ರ ಪಡೆಯಲು ಹರಸಾಹಸ ಮಾಡಿದ್ದರು.

ಈ ಪ್ರಹಸನ ಕಳೆದ ಮಾರ್ಚ್​ನಲ್ಲಿ ಆರಂಭವಾಗಿ ಜುಲೈವರೆಗೂ ನಡೆದಿತ್ತು. ಇಷ್ಟೆಲ್ಲಾ ಸಮಸ್ಯೆಯಾದರೂ ಶಿಕ್ಷಣ ಇಲಾಖೆ ಈ ವರ್ಷವೂ ತಪು್ಪ ತಿದ್ದಿಕೊಳ್ಳುವ ಮತ್ತು ಪರೀಕ್ಷೆ ವಿಷಯದಲ್ಲಿ ಸ್ಪಷ್ಟತೆ ನೀಡುವ ಕೆಲಸಕ್ಕೆ ಮುಂದಾಗಿಲ್ಲ.

ಪಾಲಕರ ಬೇಡಿಕೆ ಏನು?: ಮೌಲ್ಯಾಂಕನ ಸಂಬಂಧ ಖಾಸಗಿ ಶಾಲೆಗಳು ಹೂಡಿರುವ ಪ್ರಕರಣ ಸದ್ಯ ಸುಪ್ರೀಂಕೋರ್ಟ್​ನಲ್ಲಿದೆ. ಮೊದಲು ಪ್ರಕರಣ ಇತ್ಯರ್ಥಗೊಳಿಸಲು ಶಾಲಾ ಶಿಕ್ಷಣ ಇಲಾಖೆ ಮುಂದಾಗಬೇಕು. ಮೌಲ್ಯಾಂಕನವನ್ನು ಯಾವ ಉದ್ದೇಶದಿಂದ ನಡೆಸುತ್ತಿದ್ದೇವೆ ಹಾಗೂ ಪರೀಕ್ಷೆ ನಿಯಮ ಏನು ಹೇಳುತ್ತವೆ ಎಂಬುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಮುಂದಿನ ಮೌಲ್ಯಾಂಕನವನ್ನು ಶಾಲೆಗಳು ನಡೆಸುತ್ತವೆಯೋ ಅಥವಾ ಮಂಡಳಿ ನಡೆಸುತ್ತದೆಯೋ ಎಂಬ ಸ್ಪಷ್ಟ ನಿಲುವನ್ನು ಪ್ರಕಟಿಸಿದರೆ ಅನುಕೂಲವಾಗಲಿದೆ ಎಂಬುದು ಪಾಲಕ ಕುಮಾರ್ ಆಗ್ರಹಿಸಿದ್ದಾರೆ. ಮತ್ತೆ ಖಾಸಗಿ ಶಾಲೆಗಳು ಕೋರ್ಟ್ ಮೊರೆ ಹೋಗುವುದು, ಮಕ್ಕಳು ಪರೀಕ್ಷಾ ಭಯದಲ್ಲಿ ದಿನ ಕಳೆಯುವ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ಪಾಲಕ ರಮೇಶ್ ಎಂಬುವವರು ಒತ್ತಾಯಿಸಿದ್ದಾರೆ.

ಸರ್ಕಾರ ಮಾಡಬೇಕಿರುವುದೇನು?: ಕೇಂದ್ರ ಸರ್ಕಾರ 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್​ಟಿಇ) ಅನ್ನು ಜಾರಿಗೊಳಿಸಿತು. ಅದನ್ನು ರಾಜ್ಯದಲ್ಲಿ 2012ರಲ್ಲಿ ಅನುಷ್ಠಾನಗೊಳಿಸಿತು. ಆ ನಂತರ 6ರಿಂದ 14ವರ್ಷದೊಳಗಿನ ಎಲ್ಲ ಮಕ್ಕಳಿಗೂ ಕಡ್ಡಾಯ ಶಿಕ್ಷಣ ನೀಡುವ ಉದ್ದೇಶದಿಂದ ಅನುತ್ತೀರ್ಣ ಮಾಡುವಂತಿಲ್ಲ ಎಂಬ ನಿಯಮ ಜಾರಿಗೊಳಿಸಿತು. ಮಕ್ಕಳನ್ನು ಅನುತ್ತೀರ್ಣ ಮಾಡದ ಕಾರಣ ಕಲಿಕಾ ಗುಣಮಟ್ಟ ಕುಸಿಯುತ್ತಿದೆ ಎಂಬುದು ಹಲವು ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಅಭಿಪ್ರಾಯವಾಗಿತ್ತು. ಈ ದೃಷ್ಟಿಯಿಂದ ಕೇಂದ್ರ ಸರ್ಕಾರ 2019ರಲ್ಲಿ ಆರ್​ಟಿಇ ನಿಯಮಗಳಿಗೆ ತಿದ್ದುಪಡಿ ಮಾಡಿದೆ. ಕಲಿಕಾ ಪ್ರಗತಿ ತಿಳಿಯಲು 5 ಮತ್ತು 8ನೇ ತರಗತಿಗಳಿಗೆ ಮೌಲ್ಯಾಂಕನ ನಡೆಸಬಹುದೆಂದು ನಿಯಮ ತಿದ್ದುಪಡಿ ಮಾಡಲಾಗಿದೆ. ಇದೇ ನಿಯಮವನ್ನು ಶಿಕ್ಷಣ ಇಲಾಖೆಯು ಅನುಸರಿಸುತ್ತಿದೆ. ಆದರೆ, ಪರೀಕ್ಷೆಯನ್ನು ಶಾಲಾ ಹಂತದಲ್ಲಿ ಮಾಡಬೇಕೋ ಅಥವಾ ಮಂಡಳಿ ವತಿಯಿಂದ ಮಾಡಬೇಕೋ ಎಂದು ನಿಖರವಾಗಿ ಹೇಳಿಲ್ಲ. ಈ ಕಾರಣದಿಂದ ಸರ್ಕಾರವು ಆರ್​ಟಿಇ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರದ ಹಂತದಲ್ಲಿಯೇ ಪರೀಕ್ಷೆ ನಡೆಸಲು ತೀರ್ವನಿಸಲಾಗಿದೆ ಎಂಬ ಆದೇಶ ಹೊರಡಿಸಿದರೆ ಮೌಲ್ಯಾಂಕನ ಕಾರ್ಯ ಸಲೀಸಾಗಲಿದೆ. ಸರ್ಕಾರ ಅದನ್ನು ಮಾಡದ ಕಾರಣ ಕಾನೂನಾತ್ಮಕವಾಗಿ ಖಾಸಗಿ ಶಾಲೆಗಳ ಎದುರು ಸೋಲುವಂತಾಗಿದೆ ಎಂದು ಇಲಾಖೆ ಅಧಿಕಾರಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಮೌಲ್ಯಾಂಕನ ನಡೆಸುವ ಸಂಬಂಧ ಸರ್ಕಾರದಿಂದ ಈವರೆಗೆ ಆದೇಶ ಬಂದಿಲ್ಲ. ಸಸೂಚನೆ ಬಂದಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ. - ಎನ್. ಮಂಜುಶ್ರೀ, ಅಧ್ಯಕ್ಷೆ, ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಆರ್​ಟಿಇ ತಿದ್ದುಪಡಿ ಕಾಯ್ದೆಯನ್ನು ನ್ಯಾಯಾಲಯದಕ್ಕೆ ಮನವರಿಕೆ ಮಾಡಿಕೊಡುವಲ್ಲಿ ವಿಫಲವಾಗುತ್ತಿದ್ದಾರೆ. ಇದರ ಪರಿಣಾಮ ಪ್ರತಿ ವರ್ಷ ಗೊಂದಲ ಮುಂದುವರಿಯುತ್ತಿದೆ. ಕೂಡಲೇ ಸರ್ಕಾರ ಈ ವಿಚಾರವಾಗಿ ಸ್ಪಷ್ಟತೆ ನೀಡುವ ಕೆಲಸ ಮಾಡಬೇಕು. | ಡಿ. ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ, ಕ್ಯಾಮ್್ಸ ಸಂಘಟನೆ

ಮೌಲ್ಯಾಂಕನ ಪ್ರಕರಣವು ಸುಪ್ರೀಂಕೋರ್ಟ್​ನಲ್ಲಿದ್ದು, ಪ್ರಕರಣ ಇತ್ಯರ್ಥವಾಗುವ ತನಕ ಇಲಾಖೆಯು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪಿನ ಆಧಾರದಲ್ಲಿ ಇಲಾಖೆಯು ಮುಂದಿನ ಕ್ರಮ ಕೈಗೊಳ್ಳಲಿದೆ. | ರಿತೇಶ್​ಕುಮಾರ್ ಸಿಂಗ್ ಪ್ರಧಾನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net