ಕರೊನಾ ಸೋಂಕು ತೀವ್ರವಾಗಿರುವ ರಾಷ್ಟ್ರಗಳಿಗೆ ಮಾನವೀಯ ದೃಷ್ಟಿಯಿಂದ ಔಷಧ ರಫ್ತಿಗೆ ಭಾರತ ನಿರ್ಧಾರ

Drugs
Published on

ಕರೊನಾ ಭೀತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಪೂರೈಸಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ಕರೊನಾ ಸೋಂಕು ತೀವ್ರವಾಗಿರುವ ರಾಷ್ಟ್ರಗಳಿಗೆ ಮಾನವೀಯ ದೃಷ್ಟಿಯಿಂದ ಔಷಧ ರಫ್ತು ಮಾಡಲಾಗುವುದು ಎಂದು ತಿಳಿಸಿದೆ.

ಕರೊನಾ ಸೋಂಕು ತಡೆಯಲು ಸದ್ಯದ ಮಟ್ಟಿಗೆ ಯಾವುದೇ ಔಷಧ ಇಲ್ಲ. ಮಲೇರಿಯಾ ಔಷಧ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆ ಪರಿಣಾಮಕಾರಿಯಾಗಿ ಕೆಲಸ ಮಾಡಬಲ್ಲದು. ಇದನ್ನು ಸಾಕಷ್ಟು ದಾಸ್ತಾನು ಇರಿಸಿಕೊಳ್ಳಲು ಕೇಂದ್ರ ಸರ್ಕಾರ ರಫ್ತು ನಿಷೇಧ ಜಾರಿ ಮಾಡಿದೆ. ಈ ಬೆನ್ನಲ್ಲೇ ಮಾತನಾಡಿದ ಟ್ರಂಪ್, ಅಮೆರಿಕದಿಂದ ವಾಣಿಜ್ಯ ವ್ಯವಹಾರದ ಲಾಭ ಪಡೆಯುತ್ತಿರುವ ಭಾರತದ ಕ್ರಮ ಕೈಗೊಂಡರೆ ತಪ್ಪೇನು? ಎಂದಿದ್ದಾರೆ. ಭಾರತದ ಪ್ರಧಾನಿ ಜತೆ ಉತ್ತಮ ಸ್ನೇಹವಿದೆ. ಆದರೂ ರಫ್ತು ನಿಷೇಧ ಹೇರಿರುವುದು ಆಶ್ಚರ್ಯಕರ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದಾರೆ. ಸಾಂಕ್ರಾಮಿಕ ರೋಗವಾಗಿರುವ ಕರೊನಾ ವಿಶ್ವವ್ಯಾಪಿಯಾಗಿ, ಅನೇಕ ರಾಷ್ಟ್ರಗಳು ನಲುಗಿವೆ. ಆದ್ದರಿಂದ ಪ್ಯಾರಸೆಟಮಾಲ್ ಮತ್ತು ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನೇ ನೆಚ್ಚಿಕೊಂಡಿರುವ ರಾಷ್ಟ್ರಗಳಿಗೆ ಲಭ್ಯತೆಗೆ ಅನುಗುಣವಾಗಿ ಸೂಕ್ತ ಪ್ರಮಾಣದಲ್ಲಿ ಇವುಗಳನ್ನು ಪೂರೈಕೆ ಮಾಡಲಾಗುವುದು. ಆದರೆ, ದೇಶದ ಅವಶ್ಯಕತೆಗೆ ಮೊದಲ ಆದ್ಯತೆ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಯ ಜತೆಗೆ ಇನ್ನಿತರ ಅತ್ಯಾವಶ್ಯಕ ಔಷಧಗಳನ್ನು ಗಂಭೀರ ಸಮಸ್ಯೆ ಎದುರಿಸುತ್ತಿರುವ ರಾಷ್ಟ್ರಗಳಿಗೆ ಒದಗಿಸಲಾಗುವುದು. ಔಷಧ ಪೂರೈಕೆ ವಿಷಯದಲ್ಲಿ ಯಾವುದೇ ಊಹಾಪೋಹಕ್ಕೆ ಅಥವಾ ವಿಷಯವನ್ನು ರಾಜಕೀಯಗೊಳಿಸುವುದಕ್ಕೆ ಅವಕಾಶ ಇಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಿಳಿಸಿದ್ದಾರೆ.

ಅಮೆರಿಕದಲ್ಲಿ ಔಷಧ ಪರೀಕ್ಷೆ ಸಿದ್ಧತೆ

ಪೆನ್ಸಿಲ್ವೇನಿಯಾದ ಬಯೋಟೆಕ್ ಸಂಸ್ಥೆಯೊಂದು ಅಭಿವೃದ್ಧಿ ಪಡಿಸಿರುವ ಕರೊನಾ ಸೋಂಕು ತಡೆ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ‘ಇನೋವಿಯೊ’ ಲಸಿಕೆಯ ಪ್ರಯೋಗಕ್ಕೆ ಒಳಗಾಗುವ 40 ಜನರ ಗುಂಪನ್ನು ಐಎನ್​ಒ-4800 ಎಂದು ಗುರುತಿಸಲಾಗಿದೆ. ಈ ಸಂಸ್ಥೆಗೆ ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಬಿಲ್ ಗೇಟ್ಸ್ ಮತ್ತು ಅವರ ಪತ್ನಿ ಮಿಲಿಂದಾ ಸ್ಥಾಪಿಸಿರುವ ಪ್ರತಿಷ್ಠಾನ ಆರ್ಥಿಕ ನೆರವು ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net