'ಅಲಾ ವೈಕುಂಠಪುರಮುಲು' ರಿಮೇಕ್ ಚಿತ್ರ​ 'ಶೆಹಜಾದ' ಗೆಲ್ಲುತ್ತಾ ಸೋಲುತ್ತಾ..?

karthik aryan
Published on

ನವದೆಹಲಿ: ಸದ್ಯದ ಸಮಯದಲ್ಲಿ ಬಾಲಿವುಡ್‌ನಲ್ಲಿ ಯಶಸ್ವಿ ನಟ ಎಂದು ಕರೆಯಲ್ಪಡುವ ಕಾರ್ತಿಕ್ ಆರ್ಯನ್ ಗೆಲುವಿನ ಕುದುರೆ ಮೇಲೆ ಸವಾರಿ ಮಾಡುತ್ತಿದ್ದಾರೆ. ಅವರ ಚಿತ್ರ ಭೂಲ್ ಭುಲೈಯಾ 2022 ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರಗಳಲ್ಲಿ ಒಂದಾಗಿದೆ. ಕಾರ್ತಿಕ್​ ಆರ್ಯನ್​ ಬಾಲಿವುಡ್​ನಲ್ಲಿ ತನ್ನದೇ ಆದ ಸ್ಥಾನವನ್ನು ರೂಪಿಸಿಕೊಂಡಿದ್ದು ಒಂದರ ನಂತರ ಒಂದರಂತೆ ಹಿಟ್‌ಗಳನ್ನು ನೀಡುತ್ತಿದ್ದಾರೆ. ಅದಲ್ಲದೇ ಅಕ್ಷಯ್ ಕುಮಾರ್ ಬದಲಿಗೆ ಕಾಮಿಡಿ ಚಿತ್ರ ಹೇರಾ ಫೇರಿ 3ನಲ್ಲಿ ಕಾರ್ತಿಕ್​ ಆರ್ಯನ್​ ನಟಿಸಲಿದ್ದಾರೆ ಎಂಬ ವದಂತಿಗಳು ಎಲ್ಲೆಡೆ ಹರಿದಾಡುತ್ತಿವೆ.

ಶೆಹಜಾದ ಚಿತ್ರ ಅಲ್ಲು ಅರ್ಜುನ್​ ನಟಿಸಿದ್ದ ಅಲಾ ವೈಕುಂಠಪುರಮುಲು ಚಿತ್ರದ ರಿಮೇಕ್​ ಆಗಿದೆ. ಈ ಚಿತ್ರದಲ್ಲಿ ರೋಹಿತ್​ ಧವನ್​, ಕೃತಿ ಸನೋನ್​, ಮನೀಷಾ ಕೋಯ್​ರಾಲಾ, ಪರೇಶ್ ರಾವಲ್​ ಮುಂತಾದವರು ನಟಿಸಿದ್ದಾರೆ. ಆರ್ಯನ್ ನಟಿಸಿರುವ ಚಿತ್ರಗಳ ಪಟ್ಟಿ ವಿಭಿನ್ನವಾಗಿದೆ. ಅವರ 32 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ, ಅವರ ಮುಂಬರುವ ಸಿನಿಮಾ ಶೆಹಜಾದ ಚಿತ್ರತಂಡ ಮೊದಲ ಟೀಸರ್​ಅನ್ನು ಬಿಡುಗಡೆ ಮಾಡಿದ್ದಾರೆ.

ಈ ಬಗ್ಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡಿದ್ದು ಅಭಿಮಾನಿ ಒಬ್ಬರು 'ಅಲಾ ವೈಕುಂಠಪುರಮುಲು ಎನ್ನುವುದು ಒಂದು ಎಮೋಷನ್​. ಯಾರಿಂದಲೂ ಅಲ್ಲು ಅರ್ಜುನ್​ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಇನ್ನೂ ಕೆಲವರ ಪ್ರಕಾರ ಕಾರ್ತಿಕ್​ ಆರ್ಯನ್​ ಕೈಯಲ್ಲಿ ಅಲ್ಲು ಅರ್ಜುನ್​ ಸ್ಟೈಲ್​ ಅನುಕರಿಸಲು ಸಾಧ್ಯ ಆಗಿಲ್ಲ. ಇನ್ನೊಬ್ಬರಂತೂ ಬಾಲಿವುಡ್​ ವತಿಯಿಂದ ಅಲ್ಲು ಅರ್ಜುನ್​ಗೆ ಸಾರಿ ಕೂಡ ಕೇಳಿದ್ದಾರೆ. ಸದ್ಯ ಟ್ರೇಲರ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಚಿತ್ರ ಗೆಲ್ಲುತ್ತಾ ಇಲ್ಲವೇ ಸೋಲುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net