ರಾಷ್ಟ್ರೀಯ ನೀರಾವರಿ ಸಚಿವರ ಸಮ್ಮೇಳನದಲ್ಲಿ ಕೇಂದ್ರದಿಂದ ಅನ್ಯಾಯದ ಬಗ್ಗೆ ಧ್ವನಿ ಎತ್ತುವೆ: ಡಿಸಿಎಂ ಡಿ.ಕೆ.ಶಿವಕುಮಾರ್ | State treasury very strong

DK Shivakumar
Published on

ಬೆಂಗಳೂರು: ರಾಜಸ್ಥಾನದ ಉದಯಪುರದಲ್ಲಿ ದೇಶದ ಎಲ್ಲ ರಾಜ್ಯಗಳ ನೀರಾವರಿ ಸಚಿವರ ರಾಷ್ಟ್ರೀಯ ಸಮ್ಮೇಳನ ಇಂದು ನಡೆಯಲಿದೆ. ನೀರಾವರಿ ಯೋಜನೆಗಳ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿ ಎತ್ತುವೆ ಎಂದು ಜಲ ಸಂಪನ್ಮೂಲ ಖಾತೆ ಹೊಂದಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ರಾಜಸ್ಥಾನಕ್ಕೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದ ಅವರು, ಮೇಕೆದಾಟು, ಮಹದಾಯಿ ಕುಡಿಯುವ ನೀರು ಪೂರೈಕೆ ಯೋಜನೆಗಳಿಗೆ ಈ ತನಕ ತೀರುವಳಿ, ಅನುಮೋದನೆ ನೀಡಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ವಿಶೇಷ ಅನುದಾನ ಪ್ರಕಟಿಸಿ ಎರಡು ವರ್ಷಗಳಾಗಿವೆ. ಪ್ರಸ್ತಾವನೆ ಸಲ್ಲಿಸಿ ಪದೇ ಪದೆ ಮನವಿ ಮಾಡಿದರೂ ಸ್ಪಂದಿಸಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕೊಚ್ಚಿ ಹೋದ ದುರಂತ ಸಂಭವಿಸಿದ ಬಳಿಕ ರಾಜ್ಯದ ಎಲ್ಲ ದೊಡ್ಡ, ಮಧ್ಯಮ ಗಾತ್ರದ ಅಣೆಕಟ್ಟೆಗಳ ಬಲವರ್ಧನೆಗೆ ರಾಜ್ಯ ಸರ್ಕಾರ ಬಯಸಿದೆ. ಅಗತ್ಯವಿರುವ ಆಧುನೀಕರಣ, ಸುರಕ್ಷತಾ ಕ್ರಮಗಳಿಗೆ ವಿಸ್ತೃತ ವರದಿಯನ್ನು ಸಿದ್ಧಪಡಿಸಿ ವಿಶೇಷ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ವಿಷಯದತ್ತಲೂ ಕೇಂದ್ರ ಜಲ ಶಕ್ತಿ ಸಚಿವರ ಗಮನಸೆಳೆಯುವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.

ನೆರೆಯ ರಾಜ್ಯಗಳ ಸಚಿವರ ಜತೆಗೆ ಚರ್ಚೆ

ಈ ಸಮ್ಮೇಳನವನ್ನು ಸದಾವಕಾಶವಾಗಿ ಬಳಸಿಕೊಂಡು ನೆರೆಯ ತೆಲಂಗಾಣ ಹಾಗೂ ಆಂಧ್ರಪ್ರದೇಶದ ನೀರಾವರಿ ಸಚಿವರೊಂದಿಗೆ ಪ್ರತ್ಯೇಕವಾಗಿ ಚರ್ಚಿಸುವೆ. ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ 32 ಟಿಎಂಸಿ ಅಡಿ ಹೂಳಿಗೆ ಪರ್ಯಾಯ ಪರಿಹಾರವಾಗಿ ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನ ಜಲಾಶಯ ನಿರ್ಮಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ.

ಈ ಕುರಿತು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ. ಪ್ರವಾಹದ ಹೆಚ್ಚುವರಿ ನೀರನ್ನು ಮಾತ್ರ ಸಮತೋಲನ ಜಲಾಶಯದಲ್ಲಿ ಸಂಗ್ರಹಿಸುವುದು ಯೋಜನೆಯ ತಿರುಳಾಗಿದೆ. ಇದರಿಂದ ವ್ಯರ್ಥ ಪೋಲಾಗುವ ನೀರಿನ ಬಳಕೆ, ಹೂಳಿಗೆ ಶಾಶ್ವತ ಪರಿಹಾರ, ಅವಲಂಬಿತ ಜಿಲ್ಲೆಗಳ ಕುಡಿಯುವ ನೀರಿನ ದಾಹ ತಣಿಸಲು, ಅಚ್ಚುಕಟ್ಟು ಪ್ರದೇಶದ ಕೊನೇ ಭಾಗದ ಬವಣೆಯೂ ನಿವಾರಣೆಯಾಗಲಿದೆ.

ತುಂಗಭದ್ರಾ ಜಲಾಶಯದಲ್ಲಿ ಶೇಖರಣೆಯಾಗುವ ನೀರು ಮೂರು ರಾಜ್ಯಗಳ ಹಂಚಿಕೆಗೂ ಯಾವುದೇ ಸಮಸ್ಯೆ ಉಂಟಾಗದು. ತುಂಗಭದ್ರಾ ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಜಂಟಿ ಯೋಜನೆಯಾಗಿದೆ. ಹೀಗಾಗಿ ನವಲಿ ಸಮತೋಲನ ಜಲಾಶಯ ನಿರ್ಮಾಣಕ್ಕೆ ನೆರೆಯ ರಾಜ್ಯಗಳ ಸಹಮತ ವ್ಯಕ್ತಪಡಿಸಿದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಸುಲಭವಾಗಲಿದೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.

'ಜಲ ಮುನ್ನೋಟ 2047': ಮುನ್ನಡೆ ಘೋಷ ವಾಕ್ಯದಡಿ ಕೇಂದ್ರ ಜಲಶಕ್ತಿ ಸಚಿವರ ಅಧ್ಯಕ್ಷತೆಯಲ್ಲಿ ರಾಷ್ಟ್ರದ ಎಲ್ಲ ರಾಜ್ಯಗಳ ನೀರಾವರಿ ಸಚಿವರ ಎರಡನೇ ಸಮ್ಮೇಳನದ ಉದಯಪುರದಲ್ಲಿ ಆಯೋಜಿಸಲಾಗಿದೆ. ಒಟ್ಟಾರೆ ಮಳೆ ಪ್ರಮಾಣ, ಜಲಾಶಯಗಳ ಒಳ ಹರಿವು, ಬಳಕೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ, ಮಹತ್ವಾಕಾಂಕ್ಷಿ ನದಿಗಳ ಜೋಡಣೆ ಯೋಜನೆ ಮತ್ತಿತರ ವಿಷಯಗಳು ಚರ್ಚೆಯಾಗಲಿವೆ.

ಬೊಕ್ಕಸ ಬಲಿಷ್ಠ

ರಾಜ್ಯದ ಬೊಕ್ಕಸ ಬಲಿಷ್ಠ ವಾಗಿದ್ದು, ಗ್ಯಾರಂಟಿ ಯೋಜನೆಗಳು ಸೇರಿ ಯಾವುದೇ ಯೋಜನೆಗಳಿಗೆ ಹಣಕಾಸಿನ ಕೊರತೆಯಾಗಿಲ್ಲ. ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಪಾವತಿಯಾಗಿಲ್ಲ ಎಂದು ಮಾಧ್ಯಮಗಳಲ್ಲಿ ವರದಿ, ಪ್ರತಿಪಕ್ಷಗಳು ಟೀಕಿಸುತ್ತಿವೆ. ಆದರೆ ಇದುವರೆಗೆ ಯಾವುದೇ ಫಲಾನುಭವಿಗಳು ತಮಗೆ ಹಣ ಬಂದಿಲ್ಲವೆಂಬ ದೂರು ನೀಡಿಲ್ಲವೆಂದು ಸಮರ್ಥಿಸಿಕೊಂಡರು.

ಪ್ರತಿ ಮಾಸಿಕ ತಪ್ಪಿದರೆ ಎರಡು ತಿಂಗಳಿಗೊಮ್ಮೆಯಂತೂ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೆರವು ಜಮೆಯಾಗುತ್ತಿದೆ. ಆರ್ಥಿಕ ವರ್ಷದ ಕೊನೆಯಾದ್ದರಿಂದ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯದ ಅಕ್ಕಿಯ ಹಣ ಮೂರು ತಿಂಗಳಿನದು ಬಾಕಿಯಿದೆ. ಆದಷ್ಟು ಬೇಗ ಪಾವತಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಮಜಾಯಿಷಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net