

ನವದೆಹಲಿ: ಪ್ರಧಾನಿ ಮೋದಿ ಅವರು ಮುಂದಿನ ತಿಂಗಳು ಆಗಸ್ಟ್ 24ರಂದು ಕೈವ್‌ಗೆ ಭೇಟಿ ನೀಡುವ ಸಾಧ್ಯತೆಯಿದೆ. ರಷ್ಯಾ-ಯೂಕ್ರೇನ್ ಯುದ್ಧ ಆರಂಭವಾದ ನಂತರ ಮೊದಲ ಬಾರಿಗೆ ಯೂಕ್ರೇನಿಯನ್ ಸ್ವಾತಂತ್ರ್ಯ ದಿನದಂದು ಪ್ರಧಾನಿ ಮೋದಿ ಅವರು ಕೈವ್‌ಗೆ ಭೇಟಿ ನೀಡುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಐರೋಪ್ಯ ರಾಷ್ಟ್ರವಾದ ಯೂಕ್ರೇನ್‌ಗೆ ಭೇಟಿ ನೀಡುವ ಮೊದಲು ಅಥವಾ ನಂತರ ಜನಾಂಗೀಯ ಸಂಘರ್ಷ ಪೀಡಿತ ಮಣಿಪುರಕ್ಕೆ ಪ್ರಧಾನಿ ಭೇಟಿ ನೀಡುತ್ತಾರೆಯೇ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಭಾನುವಾರ(ಜುಲೈ 28) ಪ್ರಶ್ನಿಸಿದ್ದಾರೆ.
ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಿದ್ದಾರೆ. ಮತ್ತು ಬಿಜೆಪಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಸಭೆಯಲ್ಲಿ ಭಾಗವಹಿಸುತ್ತಾರೆ. ಆದರೆ ಪ್ರಧಾನಿ ಮೋದಿ ಅವರನ್ನು ನೇರವಾಗಿ ಭೇಟಿಯಾಗಿದ್ದಾರೆಯೇ ಎಂದು ಕೇಳಿದ್ದಾರೆ.
ಪ್ರಧಾನಿ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಮಣಿಪುರದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದಾರೆಯೇ? ಯೂಕ್ರೇನ್ ಭೇಟಿ ಮೊದಲು ಅಥವಾ ನಂತರ ಮಣಿಪುರಕ್ಕೆ ಭೇಟಿ ನೀಡುವಂತೆ ನರೇಂದ್ರ ಮೋದಿ ಅವರನ್ನು ಸಿಎಂ ಬಿರೇನ್ ಸಿಂಗ್ ಆಹ್ವಾನಿಸಿದ್ದಾರೆಯೇ ಎಂದು ಹೇಳಿದ್ದಾರೆ.
ಮೈಥೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಸಂಘರ್ಷದಿಂದಾಗಿ ರಾಜ್ಯದಲ್ಲಿ ಗಂಭೀರ ಸ್ಥಿತಿ ಉಂಟಾಗಿದೆ. ಪ್ರಧಾನಿ ಮೋದಿಯವರ ನೇತೃತ್ವದ ಬಿಜೆಪಿಯೇ ಮಣಿಪುರದಲ್ಲಿ ಅಧಿಕಾರದಲ್ಲಿದೆ. ಮಣಿಪುರಕ್ಕೆ ಪ್ರಧಾನಿ ಮೋದಿ ಭೇಟಿ ನೀಡುತ್ತಿಲ್ಲ ಎಂದು ಕಾಂಗ್ರೆಸ್ ಪದೇಪದೆ ಟೀಕಿಸುತ್ತಿದೆ. (ಏಜೆನ್ಸೀಸ್)