

ನವದೆಹಲಿ: ಮಹಾತ್ಮ ಗಾಂಧಿ ಕುರಿತ ಅವಹೇಳನಕಾರಿ ಹೇಳಿಕೆ ವಿವಾದದಿಂದ ಕಿಂಚಿತ್ತೂ ವಿಚಲಿತರಾಗದ ಸಂಸದ ಅನಂತಕುಮಾರ್ ಹೆಗಡೆ, ಹೇಳಿಕೆಗೆ ಬದ್ಧವಾಗಿರುವುದಾಗಿ ತಿಳಿಸಿದ್ದಾರೆ. ‘ಯಾವುದೇ ರಾಜಕೀಯ ಪಕ್ಷ ಅಥವಾ ಗಾಂಧಿ ಬಗ್ಗೆ ನಾನು ಯಾವುದೇ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಕ್ಷಮೆ ಕೋರುವ ಅಗತ್ಯವಿಲ್ಲ’ ಎಂದಿದ್ದಾರೆ. ‘ಗಾಂಧೀಜಿ ಅಥವಾ ಜವಾಹರಲಾಲ್ ನೆಹರು ಅಥವಾ ಬೇರೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ನಾನು ಹೇಳಿದ್ದರೆ ಅದನ್ನು ತೋರಿಸಲಿ’ ಎಂದವರು ಸವಾಲು ಹಾಕಿದ್ದಾರೆ.
ವಿವಾದಾತ್ಮಕ ಹೇಳಿಕೆಯಿಂದ ಮುಜುಗುರ ಕ್ಕೀಡಾದ ಬಿಜೆಪಿ, ಹೆಗಡೆಗೆ ಷೋಕಾಸ್ ನೋಟಿಸ್ ನೀಡಿದ್ದು, ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದೆ.
ರಾವಣನ ಮಕ್ಕಳು ಎಂದ ಕಾಂಗ್ರೆಸ್: ಗಾಂಧಿ ಮತ್ತು ಸ್ವಾತಂತ್ರ್ಯ ಹೋರಾಟದ ಬಗ್ಗೆ ಅನಂತಕುಮಾರ್ ಹೆಗಡೆ ಮಾಡಿದ್ದ ಟೀಕೆ ಮಂಗಳವಾರ ಮತ್ತೆ ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿತು. ಬಿಜೆಪಿಯವರು ‘ರಾವಣ ಪುತ್ರರು’ ಎಂದು ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕರೆದರು. ‘ಇಂದು ಅವರು ಮಹಾತ್ಮ ಗಾಂಧಿಯನ್ನು ಅವಮಾನಿಸಿದ್ದಾರೆ. ಶ್ರೀರಾಮ ಭಕ್ತನನ್ನೇ ಅವರು ಅಪಮಾನಿಸಿದ್ದಾರೆ. ಹೀಗಾಗಿ ರಾವಣ ಪುತ್ರರು’ ಎಂದು ಚೌಧರಿ ವಾಗ್ದಾಳಿ ಮಾಡಿದರು. ಇದಕ್ಕೆ ಕಟುವಾಗಿ ಪ್ರತಿಕ್ರಿಯಿಸಿದ ಸಚಿವ ಪ್ರಲ್ಹಾದ ಜೋಶಿ, ‘ಬಿಜೆಪಿಯವರು ನಿಜವಾದ ಭಕ್ತರು. ನಾವು ಗಾಂಧಿಯ ನಿಜ ಅನುಯಾಯಿಗಳು. ಇವರೆಲ್ಲ ಸೋನಿಯಾ ಗಾಂಧಿ, ರಾಹುಲ್ ಗಾಂಧಿಯಂಥ ನಕಲಿ ಗಾಂಧಿಗಳ ಅನುಯಾಯಿಗಳು’ ಎಂದು ಛೇಡಿಸಿದರು. ಇದಾದ ಕುಪಿತರಾದ ಕಾಂಗ್ರೆಸ್ ಸದಸ್ಯರು ‘ಮಹಾತ್ಮ ಗಾಂಧಿ ಅಮರ್ ರಹೇ’ ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು. ಬೆಳಗ್ಗೆ ಈ ವಿಷಯವಾಗಿ ಗದ್ದಲ ಉಂಟಾದ ಕಾರಣ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಲಾಗಿತ್ತು.
ರಾಜ್ಯದಲ್ಲೂ ಪ್ರತಿಭಟನೆ: ಅನಂತ ಕುಮಾರ್ ಹೇಳಿಕೆ ಖಂಡಿಸಿ ರಾಜ್ಯದ ವಿವಿಧೆಡೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬ್ರಿಟಿಷರ ವಿರುದ್ಧ ಹೋರಾಡಿ ಸ್ವಾತಂತ್ರ್ಯ ಗಳಿಸಿದ್ದು ಕೇವಲ ನಾಟಕ. ಉಪವಾಸ ಸತ್ಯಾಗ್ರಹದಿಂದ ದೇಶಕ್ಕೆ ಸ್ವಾತಂತ್ರ್ಯ ಗಳಿಸಲು ಸಾಧ್ಯವಾಗಿಲ್ಲ ಎಂದು ಅನಂತಕುಮಾರ್ ಹೆಗಡೆ ನೀಡಿರುವ ಹೇಳಿಕೆ ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದಂತಾಗಿದೆ. ಈ ಹೇಳಿಕೆಯಿಂದ ಸ್ವಾತಂತ್ರ್ಯ ಸಂಭ್ರಮದಲ್ಲಿ ದೇಶಕ್ಕಾಗಿ ಹುತಾತ್ಮರಾದ ಎಲ್ಲರನ್ನೂ ಅವಮಾನಿಸಲಾಗಿದೆ ಎಂದು ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.
ಸ್ವಾತಂತ್ರ್ಯ ಹೋರಾಟ ಗಾರರಿಗೆ ಅವಮಾನ ಮಾಡಿರುವ ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಹೆಗಡೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಲೋಕಸಭಾ ಸ್ಪೀಕರ್ ಸಹ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅನಂತಕುಮಾರ್ ಹೆಗಡೆ ವರ್ತನೆಯನ್ನು ದೇಶದ ಜನ ಎಂದೆಂದಿಗೂ ಕ್ಷಮಿಸಲಾರರು.
| ಆರ್.ವಿ. ದೇಶಪಾಂಡೆ ಮಾಜಿ ಸಚಿವ
ಮಹಾತ್ಮ ಗಾಂಧಿ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಅನಂತಕುಮಾರ್ ಹೆಗಡೆ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಜತೆಗೆ ಅವರಿಗೆ ಸಾಮಾಜಿಕ ಬಹಿಷ್ಕಾರ ಹಾಕಬೇಕು.
| ಹರೀಶ್ ಕುಮಾರ್ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ