ಭಾರತದ ಉಪಕಾರ ಎಂದಿಗೂ ಮರೆಯಲು ಸಾಧ್ಯವಿಲ್ಲವೆಂದ ಡೊನಾಲ್ಡ್​ ಟ್ರಂಪ್​

modi - Donald Trump
Published on

ನವದೆಹಲಿ: ಕರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಪ್ರಭಾವ ಬೀರುತ್ತಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ರಫ್ತಿನ ಮೇಲಿದ್ದ ನಿರ್ಬಂಧ ಸಡಿಲಿಸಿದ ಭಾರತ ಸರ್ಕಾರದ ನಿರ್ಧಾರಕ್ಕೆ ಧನ್ಯವಾದ ಸಲ್ಲಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಿಮ್ಮ ಉಪಕಾರವನ್ನು ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಕೊಂಡಾಡಿದ್ದಾರೆ.

ಅಮೆರಿಕದಲ್ಲಿ ಕರೊನಾ ತೀವ್ರತೆ ದಿನೇದಿನೆ ವಿಕೋಪಕ್ಕೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಕಳುಹಿಸಿಕೊಡುವಂತೆ ಟ್ರಂಪ್ ಕೇಳಿದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಾತ್ರೆಗಳನ್ನು ಅಮೆರಿಕಕ್ಕೆ ರಫ್ತು ಮಾಡಲು ಸಮ್ಮತಿ ಸೂಚಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಟ್ರಂಪ್, ‘ಅಸಾಧಾರಣ ಸಂದರ್ಭಗಳಲ್ಲಿ ಸ್ನೇಹಿತರ ನಡುವೆ ನಿಕಟ ಸಹಯೋಗದ ಅಗತ್ಯವಿರುತ್ತದೆ. ಈ ಸಂದರ್ಭದಲ್ಲಿ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧ ಕಳುಹಿಸಿದ ಭಾರತ ಮತ್ತು ಅಲ್ಲಿನ ಜನರಿಗೆ ಧನ್ಯವಾದಗಳು. ಈ ಸಹಾಯವನ್ನು ಎಂದಿಗೂ ಮರೆಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ, ಪ್ರಬಲ ನಾಯಕತ್ವದೊಂದಿಗೆ ಭಾರತ ಮಾತ್ರವಲ್ಲದೇ ಮಾನವೀಯತೆಗೆ ಮಾಡುತ್ತಿರುವ ಸಹಾಯಕ್ಕೆ ಧನ್ಯವಾದಗಳು’ ಎಂದು ಟ್ರಂಪ್ ಹೇಳಿದ್ದಾರೆ.

ಇದಕ್ಕೂ ಮೊದಲು ಅಮೆರಿಕದ ಸುದ್ದಿ ವಾಹಿನಿಯಲ್ಲಿ ಮಾತನಾಡಿದ್ದ ಟ್ರಂಪ್, ಕರೊನಾ ಪರಿಸ್ಥಿತಿ ನಿಭಾಯಿಸಲು ಅನೇಕ ದೇಶಗಳಿಂದ ಔಷಧ ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಭಾರತದ 29 ಮಿಲಿಯನ್ ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳೂ ಸೇರಿವೆ. ಪ್ರಧಾನಿ ನರೇಂದ್ರ ಮೋದಿಯವರು ತುಂಬ ಒಳ್ಳೆಯ ಹಾಗೂ ಉತ್ತಮ ನಾಯಕ ಎಂದು ಹೇಳಿದ್ದರು.

ಸಮಯೋಚಿತ ಸಹಾಯ

ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧದ ನಿರಂತರ ಉತ್ಪಾದನೆ ಮುಂದುವರಿಸಲು ಕಚ್ಚಾವಸ್ತುಗಳ ರಫ್ತಿಗೆ ಭಾರತ ಸಮ್ಮತಿ ನೀಡಿದ್ದಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಜೈರ್ ಬೋಲ್ಸನಾರೊ ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ. ಬ್ರೆಜಿಲ್ ಜನರಿಗೆ ಭಾರತ ಸಮಯೋಚಿತವಾಗಿ ಸಹಾಯ ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಕಚ್ಚಾವಸ್ತುಗಳ ರಫ್ತಿಗೆ ಮನವಿ ಮಾಡುವಾಗ ಬ್ರೆಜಿಲ್ ಅಧ್ಯಕ್ಷರು ರಾಮಾಯಣವನ್ನು ಉಲ್ಲೇಖಿಸಿ ಗಮನಸೆಳೆದಿದ್ದರು.

ಸ್ನೇಹಿತರು ಮತ್ತಷ್ಟು ಹತ್ತಿರ

ಟ್ರಂಪ್ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ‘ಈ ರೀತಿಯ ಸಮಯ ಸ್ನೇಹಿತರನ್ನು ಹತ್ತಿರಕ್ಕೆ ತರುತ್ತದೆ. ಭಾರತ ಮತ್ತು ಅಮೆರಿಕದ ಪಾಲುದಾರಿಕೆ ಈಗ ಎಂದಿಗಿಂತ ಪ್ರಬಲವಾಗಿದೆ. ಕರೊನಾ ವಿರುದ್ಧದ ಮಾನವೀಯತೆಯ ಹೋರಾಟಕ್ಕೆ ಭಾರತ ಎಲ್ಲ ರೀತಿಯ ಸಹಾಯ ಮಾಡಲಿದೆ. ನಾವು ಈ ಹೋರಾಟವನ್ನು ಒಟ್ಟಿಗೆ ಗೆಲ್ಲುತ್ತೇವೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಗುಜರಾತ್ ಮೂಲದ ಕಂಪನಿಗಳು ಹೈಡ್ರಾಕ್ಸಿಕ್ಲೋರೊಕ್ವಿನ್ ಮಾತ್ರೆಗಳನ್ನು ಅಮೆರಿಕಕ್ಕೆ ಸರಬರಾಜು ಮಾಡಲು ತಯಾರಿ ನಡೆಸಿವೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧದ ಅತೀ ದೊಡ್ಡ ರಫ್ತುದಾರ ರಾಷ್ಟ್ರವಾಗಿದೆ. ಮಲೇರಿಯಾ ರೋಗಕ್ಕೆ ಬಳಸುವ ಈ ಔಷಧ ಕರೊನಾ ಸೋಂಕಿನ ವಿರುದ್ಧ ಪರಿಣಾಮಕಾರಿ ಪ್ರಭಾವ ಬೀರುತ್ತಿರುವುದರಿಂದ ಇತ್ತೀಚೆಗೆ ಇದರ ರಫ್ತಿನ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಆದರೀಗ ಕರೊನಾ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆ ಹಲವು ರಾಷ್ಟ್ರಗಳು ಈ ಔಷಧ ಕಳಹಿಸಿಕೊಡುವಂತೆ ಭಾರತಕ್ಕೆ ಮನವಿ ಮಾಡುತ್ತಿವೆ.

ನೆರೆ ರಾಷ್ಟ್ರಗಳಿಗೆ ಭಾರತ ನೆರವು

ಕರೊನಾ ವೈರಸ್ ವಿರುದ್ಧದ ಹೋರಾಟದ ಭಾಗವಾಗಿ ಭಾರತ ನೆರೆಯ ರಾಷ್ಟ್ರಗಳಿಗೆ ಜೀವ ರಕ್ಷಕ ಔಷಧಗಳನ್ನು ಉಡುಗೊರೆಯಾಗಿ ಕಳುಹಿಸಲು ಪ್ರಾರಂಭಿಸಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಭೂತಾನ್, ಬಾಂಗ್ಲಾದೇಶ, ಅಫ್ಘಾನಿಸ್ತಾನ, ನೇಪಾಳ, ಮ್ಯಾನ್ಮಾರ್, ಸೀಶೆಲ್ಸ್, ಮಾರಿಷಸ್ ಮತ್ತು ಆಫ್ರಿಕಾದ ಕೆಲ ರಾಷ್ಟ್ರಗಳಿಗೆ ಸರ್ಕಾರ ಅಗತ್ಯ ಔಷಧ ನೆರವು ನೀಡುತ್ತಿದೆ. ಈಗಾಗಲೇ ಶ್ರೀಲಂಕಾಗೆ ವಿವಿಧ ವೈದ್ಯಕೀಯ ಸರಕುಗಳನ್ನು ಒಳಗೊಂಡ ಒಂದು ವಿಮಾನವನ್ನು ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಇದರ ಜತೆಗೆ ವಾಣಿಜ್ಯ ಒಪ್ಪಂದಗಳಿಗೆ ಅನುಗುಣವಾಗಿ ಅಮೆರಿಕ, ಸ್ಪೇನ್, ಬ್ರೆಜಿಲ್, ಬಹ್ರೇನ್, ಜರ್ಮನಿ ಮತ್ತು ಬ್ರಿಟನ್​ಗೂ ಕೂಡ ಹಲವು ಔಷಧಗಳನ್ನು ರಫ್ತು ಮಾಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net