

PM Modi : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತದ ವಿರುದ್ಧ ಸುಂಕ ಸಮರ ಆರಂಭಿಸಿದ ಮರುದಿನವೇ (ಆಗಸ್ಟ್ 07) ಪ್ರಧಾನಿ ನರೇಂದ್ರ ಮೋದಿ, ಖಡಕ್ ಸಂದೇಶವನ್ನು ರವಾನಿಸಿದ್ದಾರೆ. ಭಾರತ ತನ್ನ ರೈತರು, ಪಶುಸಂಗೋಪನಾ ಉದ್ಯಮ ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಇದರಿಂದ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಿದ್ದರೂ ರೈತರಿಗಾಗಿ ಅದನ್ನು ಮಾಡಲು ಸಿದ್ಧನಿದ್ದೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ಎಂ.ಎಸ್. ಸ್ವಾಮಿನಾಥನ್ ಶತಮಾನೋತ್ಸವ ಅಂತಾರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ರೈತರ ಹಿತಾಸಕ್ತಿ ನಮ್ಮ ಪ್ರಮುಖ ಆದ್ಯತೆಯಾಗಿದೆ. ಭಾರತ ತನ್ನ ರೈತರು, ಜಾನುವಾರು ಮಾಲೀಕರು ಮತ್ತು ಮೀನುಗಾರರ ಹಿತಾಸಕ್ತಿಗಳೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ ಮತ್ತು ಇದಕ್ಕಾಗಿ ನಾನು ವೈಯಕ್ತಿಕವಾಗಿ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ನನಗೆ ತಿಳಿದಿದೆ. ಆದರೆ, ನಾನು ಅದಕ್ಕೆ ಸಿದ್ಧನಿದ್ದೇನೆ. ದೇಶದ ರೈತರು, ಮೀನುಗಾರರು ಮತ್ತು ಜಾನುವಾರು ಮಾಲೀಕರ ಹಿತದೃಷ್ಟಿಯಿಂದ ಭಾರತ ಸಿದ್ಧವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಅವರ ಹೊಸ ಸುಂಕ ನಿಯಮಗಳು ಜಾರಿಗೆ ಬಂದ ಬೆನ್ನಲ್ಲೇ ಪ್ರಧಾನಿ ಹೇಳಿದರು.
ಹಸಿರು ಕ್ರಾಂತಿಯ ಶಿಲ್ಪಿ ಎಂ.ಎಸ್. ಸ್ವಾಮಿನಾಥನ್ ಅವರಿಗೆ ಗೌರವ ಸಲ್ಲಿಸಿದ ಪ್ರಧಾನಿ, ಆಹಾರ ಭದ್ರತೆಯ ಪರಂಪರೆಯನ್ನು ನಿರ್ಮಿಸುವುದು ಮತ್ತು ಎಲ್ಲರಿಗೂ ಪೌಷ್ಠಿಕಾಂಶ ಭದ್ರತೆಯನ್ನು ಖಚಿತಪಡಿಸುವುದು ನಮ್ಮ ಕೃಷಿ ವಿಜ್ಞಾನಿಗಳ ಮುಂದಿನ ಗಡಿ ಎಂದು ಇದೇ ವೇಳೆ ಪ್ರಧಾನಿ ಮೋದಿ ಹೇಳಿದರು.
ಅಂದಹಾಗೆ, ಭಾರತವು ಅಮೆರಿಕಕ್ಕೆ ವಿವಿಧ ರೀತಿಯ ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತದೆ ಮತ್ತು ಟ್ರಂಪ್ ಇದೀಗ ವಿಧಿಸಿರುವ ಸುಂಕಗಳ ಹೊರೆ ಬೀಳುವ ಕ್ಷೇತ್ರಗಳಲ್ಲಿ ಕೃಷಿ ಕೂಡ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಪ್ರತಿಕ್ರಿಯಿಸಿದ್ದಾರೆ.
ಭಾರತದ ಮೇಲೆ ಹೆಚ್ಚುವರಿಯಾಗಿ ಶೇ. 25 ರಷ್ಟು ಸುಂಕ ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರವನ್ನು ವ್ಯಾಪಕವಾಗಿ ಟೀಕಿಸಲಾಗುತ್ತಿದೆ. ರಷ್ಯಾದೊಂದಿಗೆ ಭಾರತ ತೈಲ ವ್ಯಾಪಾರ ಮಾಡುತ್ತಿರುವ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದಾಗಿ ಟ್ರಂಪ್ ಹೇಳಿದ್ದಾರೆ. ಅಲ್ಲದೆ, ಸ್ಥಳೀಯ ಸಮಯದ ಪ್ರಕಾರ, ಟ್ರಂಪ್ ಅವರು ಬುಧವಾರ ಸಂಜೆ (ಭಾರತೀಯ ಸಮಯದ ಪ್ರಕಾರ ಗುರುವಾರ ಬೆಳಗ್ಗೆ) ಶ್ವೇತಭವನದಲ್ಲಿರುವ ತಮ್ಮ ಓವಲ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ, ರಷ್ಯಾದೊಂದಿಗಿನ ತೈಲ ವ್ಯಾಪಾರ ಮುಂದುವರಿದರೆ ಭಾರತದ ಮೇಲೆ ದ್ವಿತೀಯ ನಿರ್ಬಂಧಗಳು ಅಗತ್ಯವಾಗುತ್ತವೆ ಎಂದು ಎಚ್ಚರಿಸಿದರು. ಇದರ ಬೆನ್ನಲ್ಲೇ ಪ್ರಧಾನಿ ಮೋದಿಯಿಂದ ಖಡಕ್ ಪ್ರತಿಕ್ರಿಯೆ ಬಂದಿದೆ.
ಭಾರತೀಯ ರಫ್ತಿನ ಮೇಲಿದ್ದ ಶೇ. 25ರಷ್ಟು ಸುಂಕವನ್ನು ಹೆಚ್ಚುವರಿ ಶೇ. 25 ಸುಂಕವನ್ನು ಸೇರಿಸುವ ಮೂಲಕ ಶೇ. 50 ಕ್ಕೆ ಏರಿಸಿದೆ. ಅಮೆರಿಕದ ಈ ನಿರ್ಧಾರವನ್ನು ಭಾರತದ ವಿದೇಶಾಂಗ ಸಚಿವಾಲಯ ಟೀಕಿಸಿದೆ. ರಷ್ಯಾದ ತೈಲ ಆಮದಿನ ಹಿನ್ನೆಲೆಯಲ್ಲಿ ಅಮೆರಿಕ, ಭಾರತವನ್ನು ಗುರಿಯಾಗಿಸಿಕೊಂಡಿರುವುದು "ಅನ್ಯಾಯ, ನ್ಯಾಯಸಮ್ಮತವಲ್ಲದ ಮತ್ತು ಅಸಮಂಜಸ" ಎಂದು ಹೇಳಿದೆ.
ನಮ್ಮ ಆಮದುಗಳು ಮಾರುಕಟ್ಟೆ ಅಂಶಗಳನ್ನು ಆಧರಿಸಿವೆ ಮತ್ತು ಭಾರತದ 1.4 ಶತಕೋಟಿ ಜನರ ಇಂಧನ ಸುರಕ್ಷತೆಯನ್ನು ಖಾತರಿಪಡಿಸುವ ಒಟ್ಟಾರೆ ಉದ್ದೇಶದಿಂದ ಮಾಡಲ್ಪಟ್ಟಿವೆ. ಈ ವಿಚಾರವಾಗಿ ನಮ್ಮ ನಿಲುವನ್ನು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಆದ್ದರಿಂದ, ಹೆಚ್ಚುವರಿ ಸುಂಕಗಳನ್ನು ವಿಧಿಸಲು ಅಮೆರಿಕ, ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ. ಅಲ್ಲದೆ, ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಒತ್ತಿ ಹೇಳಿದೆ. (ಏಜೆನ್ಸೀಸ್)