

Patna: ಇದೇ ವಾರ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಜನ ಸುರಾಜ್ ಪಕ್ಷವು 10 ಕ್ಕಿಂತ ಕಡಿಮೆ ಸ್ಥಾನಗಳನ್ನು, ಇಲ್ಲವೇ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಪಕ್ಷ ಸಂಸ್ಥಾಪಕ ಮತ್ತು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ(ನವೆಂಬರ್ 1) ಎನ್‌ಡಿಟಿವಿಯ ಬಿಹಾರ ಪವರ್ ಪ್ಲೇ ಕಾನ್ಕ್ಲೇವ್‌ನಲ್ಲಿ ಮಾತನಾಡಿದ ಕಿಶೋರ್, ಜನ್ ಸುರಾಜ್ ಪಕ್ಷ ತನ್ನ ಚೊಚ್ಚಲ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆಲ್ಲಬಹುದು ಎಂಬ ಪ್ರಶ್ನೆಗೆ ಉತ್ತರಿಸಿದ್ದು, ನನಗೆ ಎರಡು ಸಂಭವನೀಯತೆಗಳು ಕಾಣುತ್ತಿವೆ. ಜನರು ಜನ್ ಸುರಾಜ್ ಪಕ್ಷವನ್ನು ಪರ್ಯಾಯ ಆಶಾಕಿರಣವಾಗಿ ನೋಡುತಿದ್ದಾರೆ,ಅವರಲ್ಲಿ ದೀರ್ಘಕಾಲದ ಹತಾಶೆ ಇದೆ ಎಂದು ಕಿಶೋರ್ ಹೇಳಿದರು, ಜನ್ ಸುರಾಜ್ 10 ಕ್ಕಿಂತ ಕಡಿಮೆ ಅಥವಾ 150 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿದರು.
ನೀವು ಚುನಾವಣೆಯಲ್ಲಿ ಏಕೆ ಸ್ಪರ್ಧಿಸುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಪ್ರಶಾಂತ್, ನಾನು ಸ್ಪರ್ಧಿಸುವುದಾದರೆ ಕಾರ್ಗಹಾರ್‌ನಿಂದ ಸ್ಪರ್ಧಿಸುತ್ತೇನೆ ಎಂದು ಹೇಳಿದ್ದೆ. ಇಲ್ಲಿ ನನ್ನ ಸ್ಪರ್ಧೆಯೊಂದೆ ಎಕ್ಸ್ ಫ್ಯಾಕ್ಟರ್ ಅಲ್ಲ, ನವೆಂಬರ್ 14 ರಂದು ಮತ ಎಣಿಕೆ ನಡೆಯುವಾಗ ಜನ್ ಸುರಾಜ್ ಗೆದ್ದ ಸ್ಥಾನಗಳ ಮೇಲೆ ಅಥವಾ ನಾನು ಸ್ಪರ್ಧಿಸಿದೆನೇ ಅಥವಾ ಇಲ್ಲವೇ ಎಂಬುದರ ಮೇಲೆ ಯಶಸ್ಸನ್ನು ಅಳೆಯಲಾಗುತ್ತದೆಯೇ? ಎಂದು ಪ್ರಶ್ನಸಿದರು.
ಬಿಹಾರದಲ್ಲಿ ಮಹಾಘಟಬಂಧನ್ ಮತ್ತು ಎನ್‌ಡಿಎ ಮೈತ್ರಿಕೂಟಕ್ಕೆ ಪರ್ಯಾಯವಿಲ್ಲ ಎಂಬ ವಾತಾವರಣ ನಿರ್ಮಾಣ ಮಾಡಲಾಗಿದೆ. ಅಂತಹ ಗ್ರಹಿಕೆ ಕೇವಲ ಒಂದು ವಿಷಯವಷ್ಟೆ, ವಾಸ್ತವದಲ್ಲಿ ಬಿಹಾರದ 1/3 ನೇ ಭಾಗದಷ್ಟು ಜನರು ಆ ಎರಡು ಮೈತ್ರಿಕೂಟಗಳ ಆಡಳಿತವನ್ನು ನೋಡಿ ರೋಸಿ ಹೋಗಿದ್ದು, ಮತ್ತೆ ಅದೇ ನಾಯಕರುಗಳಿಗೆ ಮತ ಹಾಕಲು ಬಯಸುವುದಿಲ್ಲ ಎಂದು ಸಮೀಕ್ಷೆಗಳು ನುಡಿದಿದ್ದು, ಜನ್ ಸುರಾಜ್ ಕನಿಷ್ಠ 160-170 ಸ್ಥಾನಗಳಲ್ಲಿ ತ್ರಿಕೋನ ಸ್ಪರ್ಧೆ ಒಡ್ಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.(ಏಜೆನ್ಸೀಸ್)